ಬೆಳ್ಳಿ ಬೆಲೆ ದಾಖಲೆ ಮಟ್ಟದ ಏರಿಕೆ: ಕೆಜಿಗೆ ₹1,04,100!

ನವದೆಹಲಿ: ಬೆಳ್ಳಿಯ ಬೆಲೆ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಕೆಜಿಗೆ 1,04,100 ರೂ.ಗೆ ತಲುಪಿ ಸಾರ್ವಕಾಲಿಕ ದಾಖಲೆ ನಿರ್ವಿುಸಿದೆ. ಬೆಳ್ಳಿ ಬೆಲೆ ಏರುತ್ತಿರುವುದು ಇದು ಸತತ ನಾಲ್ಕನೇ ದಿನವಾಗಿದ್ದು, ಗುರುವಾರ ಒಮ್ಮೆಲೇ 2 ಸಾವಿರ ರೂ.ನಷ್ಟು ಹೆಚ್ಚಳವಾಗಿದೆ. ಮಾ.

19ರಂದು ಬೆಳ್ಳಿ ಕೆಜಿಗೆ 1,03,500 ರೂ. ಆಗಿದ್ದೇ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಈ ಮಧ್ಯೆ, ಚಿನ್ನದ ಬೆಲೆ 430 ರೂ. ಏರಿದ್ದು, ಶೇ. 99.9ರಷ್ಟು ಶುದ್ಧತೆಯ ಚಿನ್ನ 10 ಗ್ರಾಂಗೆ 99,690 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ದರ 400 ರೂ.ನಷ್ಟು ಏರಿದ್ದು, 10 ಗ್ರಾಂಗೆ 99,100 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಏರುಗತಿಯಲ್ಲಿ ಷೇರು ಮಾರುಕಟ್ಟೆ
ಮುಂಬೈ: ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ನಂತಹ ಬ್ಲ್ಯೂಚಿಪ್ ಕಂಪನಿಗಳ ಷೇರುಗಳಿಗೆ ಕುದುರಿದ ಬೇಡಿಕೆ, ಹೆಚ್ಚಿದ ವಿದೇಶಿ ಹೂಡಿಕೆ, ಜಾಗತಿಕ ಮಾರುಕಟ್ಟೆಯ ದೃಢ ಪ್ರವೃತ್ತಿ ಮುಂತಾದ ಕಾರಣಗಳಿಂದಾಗಿ ಭಾರತೀಯ ಷೇರುಪೇಟೆ ಸತತ 2ನೇ ದಿನವಾದ ಗುರುವಾರವೂ ಏರಿಕೆ ದಾಖಲಿಸಿದೆ. ದಿನದ ವಹಿವಾಟಿನ ಮಧ್ಯೆ, 912 ಅಂಕ ಏರಿಕೆಯಾಗಿ 81,911ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 443 ಅಂಕ ಏರಿಕೆ ದಾಖಲಿಸಿ 81,442ಕ್ಕೆ ಸ್ಥಿರಗೊಂಡಿತು. ನಿಫ್ಟಿ ಕೂಡ 130 ಅಂಕ ಏರಿಕೆಯಾಗಿ 24,750ಕ್ಕೆ ಸ್ಥಿರವಾಯಿತು. ಎಟರ್ನಲ್ ಷೇರುಗಳ ಬೆಲೆ ಅತಿ ಹೆಚ್ಚು, ಶೇ. 4.5ರಷ್ಟು ಏರಿಕೆ ಕಂಡಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 1,076 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.