24 ಗಂಟೆಗಳ ಗಾಯನದಿಂದ ಗೋಲ್ಡನ್ ಬುಕ್ನಲ್ಲಿ ಯಶವಂತ್ ಎಂ.ಜಿ!

ಮಂಗಳೂರು: ಸತತ 24 ಗಂಟೆಗಳ ಕಾಲ ಡಾ| ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಹಾಡುಗಳನ್ನು ಹಾಡುವ ಮೂಲಕ ಕರಾವಳಿ ಮೂಲದ ಯಶವಂತ್ ಎಂ.ಜಿ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿದ್ದಾರೆ.
ಪುರಭವನದಲ್ಲಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ “ಬಾಲಗಾನ ಯಶೋಯಾನ’ ನಿರರ್ಗಳ ಗಾಯನ ಬುಧವಾರ ಮಧ್ಯಾಹ್ನ 3 ಗಂಟೆಗೆ ಸಮಾಪನಗೊಂಡಿತು.
ಗಾನ ಗಂಧರ್ವ ಡಾ| ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಯಶವಂತ್ ಏಕಾಂಗಿಯಾಗಿ ಹಾಡಿ ದಾಖಲೆ ನಿರ್ಮಿಸಿದರು.
ಕಾರ್ಯಕ್ರಮವನ್ನು ವೀಕ್ಷಿಸಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಷ್ಯಾ ಮುಖ್ಯಸ್ಥ ಡಾ| ಮನೀಶ್ ವಿಶ್ನೊಯ್ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ಪತ್ರ ಹಸ್ತಾಂತರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮನೀಶ್, “ಮಾತೆರೆಗ್ಲಾ ನಮಸ್ಕಾರ’ ಎನ್ನುತ್ತಾ ಮಾತು ಆರಂಭಿಸಿದರು. ಯಶವಂತ್ ಅವರು ಡಾ| ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನ ಆಚರಿಸಿದಂತೆ ಇಲ್ಲಿಯವರೆಗೆ ಯಾರೂ ಆಚರಿಸಿಲ್ಲ. 24 ಗಂಟೆಗಳ ಕಾಲ ನಿರಂತರ ಗಾಯನ ಸಾಮಾನ್ಯ ವಿಷಯವಲ್ಲ. ಸಾಕಷ್ಟು ವಿಶ್ವ ದಾಖಲೆಗಳನ್ನು ನಾನು ಕಂಡಿದ್ದು, ಇಂತಹ ಮಧುರವಾದ ದಾಖಲೆ ನೋಡಿಲ್ಲ ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಕಲಾವಿದನನ್ನು ಉಳಿಸಿದರೆ ಕಲೆ ಉಳಿಯುತ್ತದೆ ಎಂದರು. ಮಂಗಳೂರು ಎಸಿಪಿ ಗೀತಾ ಕುಲಕರ್ಣಿ, ಉದ್ಯಮಿ ವಾಲ್ಟರ್ ನಂದಳಿಕೆ, ಮೂಡುಬಿದರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಮಾಜಿ ಎಸಿ ಪ್ರಭಾಕರ್ ಶರ್ಮಾ, ಉದ್ಯಮಿ ಪೂರ್ಣಚಂದ್ರ ಜೈನ್, ಜಿ.ಎಸ್. ಕಾಮತ್, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ, ಪಾಲಿಕೆ ಮಾಜಿ ಸದಸ್ಯ ಜಗದೀಶ್ ಶೆಟ್ಟಿ, ಯಶವಂತ್ ಅವರ ತಾಯಿ ಹೇಮಾವತಿ ಉಪಸ್ಥಿತರಿದ್ದರು.