800 ವರ್ಷದ ಹಳೆಯ ದೇವಾಲಯಕ್ಕಾಗಿ ಗಡಿ ಸಂಘರ್ಷ: ಕಾಂಬೋಡಿಯಾ-ಥೈಲ್ಯಾಂಡ್ ನಡುವೆ ಮತ್ತೊಮ್ಮೆ ಉದ್ವಿಗ್ನತೆ

ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಗಡಿಯಲ್ಲಿ ಬಹಳ ಹಳೆಯ ದೇವಾಲಯವಿದ್ದು, ಎರಡೂ ದೇಶಗಳು ಅದನ್ನು ತಮ್ಮದು ಎಂದು ಹೇಳಿಕೊಳ್ಳುತ್ತವೆ. ಈ ದೇವಾಲಯದ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಮತ್ತೊಮ್ಮೆ ಸಂಘರ್ಷ ಉಂಟಾಗಿದೆ. ಈ ದೇವಾಲಯದ ಹೆಸರು ಪ್ರಸಾದ್ ತಾ ಮೊಯೆನ್ ಥಾಮ್ ಇದು ಶಿವನ ದೇವಾಲಯವಾಗಿದೆ.

ಈ ದೇವಾಲಯವು ಸುಮಾರು 800 ವರ್ಷಗಳಷ್ಟು ಹಳೆಯದಾಗಿದ್ದು, ಶಿವನಿಗೆ ಅಪರ್ಪತವಾಗಿದೆ. ಈ ದೇವಾಲಯವು ಸಾಮಾನ್ಯ ಧಾರ್ಮಿಕ ಸ್ಥಳವಲ್ಲ, ಆದರೆ ಇದರ ಐತಿಹಾಸಿಕ, ಧಾರ್ಮಿಕ ಮತ್ತು ಭೌಗೋಳಿಕ ಪ್ರಾಮುಖ್ಯತೆಯು ಎಷ್ಟಿದೆಯಂದರೆ ಇದು ದಶಕಗಳಿಂದ ಎರಡೂ ದೇಶಗಳ ನಡುವಿನ ವಿವಾದದ ಕೇಂದ್ರಬಿಂದುವಾಗಿದೆ.
ಈ ಬಾರಿಯೂ ದೇವಾಲಯದ ಕಾರಣದಿಂದಾಗಿ ಗಡಿಯಲ್ಲಿ ಗುಂಡಿನ ದಾಳಿ ನಡೆದು, ಕಾಂಬೋಡಿಯನ್ ಸೈನಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಬಳಿಕ ಕಾಂಬೋಡಿಯಾದ ಪ್ರಧಾನಿ ಹುನ್ ಮಾನೆಟ್ ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಆದರೆ 800 ವರ್ಷ ಹಳೆಯ ದೇವಾಲಯಕ್ಕಾಗಿ ಎರಡೂ ದೇಶಗಳು ಇಷ್ಟು ವರ್ಷಗಳಿಂದ ಏಕೆ ಕಾದಾಡುತ್ತಿವೆ ಎಂಬುದನ್ನು ತಿಳಿಯಬೇಕಿದೆ.
ದೇವಾಲಯದ ಬಗ್ಗೆ ವಿವಾದ ಏಕೆ?
ಈ ವಿವಾದದ ಮೂಲ ಈ ದೇವಸ್ಥಾನ ಇರುವ ಭೂಮಿ. ಪ್ರಸಾದ್ ತಾ ಮೊಯೆನ್ ಥಾಮ್ ದೇವಾಲಯವನ್ನು ಕಾಂಬೋಡಿಯಾದ ಒಡ್ಡರ್ ಮೀನ್ ಚೆಯ್ ಪ್ರಾಂತ್ಯ ಮತ್ತು ಥೈಲ್ಯಾಂಡ್ ಸುರಿನ್ ಪ್ರಾಂತ್ಯದ ಗಡಿಯಲ್ಲಿರುವ ಡಾಂಗ್ರೆಕ್ ಬೆಟ್ಟಗಳಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶದ ಗಡಿ ರೇಖೆಯನ್ನು ಇನ್ನೂ ಸ್ಪಷ್ಟವಾಗಿ ನಿರ್ಧರಿಸಲಾಗಿಲ್ಲ, ಈ ಕಾರಣದಿಂದಾಗಿ ಎರಡೂ ದೇಶಗಳು ಇದನ್ನು ತಮ್ಮ ಪ್ರದೇಶವೆಂದು ಹೇಳಿಕೊಳ್ಳುತ್ತವೆ.
ಈ ಅಸ್ಪಷ್ಟತೆಯಿಂದಾಗಿ ದೇವಾಲಯದ ಪ್ರದೇಶದಲ್ಲಿ ಯಾವಾಗಲೂ ಸೈನಿಕರನ್ನು ನಿಯೋಜಿಸಲಾಗುತ್ತದೆ. ಮತ್ತು ಆಗಾಗ ಉದ್ವಿಗ್ನತೆ ಮತ್ತು ಘರ್ಷಣೆಗಳು ಸಂಭವಿಸುತ್ತವೆ. ಕೆಲವೊಮ್ಮೆ ಪರಿಸ್ಥಿತಿ ಎಷ್ಟು ಗಂಭೀರವಾಗುತ್ತದೆ ಎಂದರೆ ಎರಡೂ ದೇಶಗಳ ಸೈನಿಕರು ಮುಖಾಮುಖಿಯಾಗುತ್ತಾರೆ.
ದೇವಾಲಯದ ಇತಿಹಾಸವೇನು?
ಪ್ರಸಾದ್ ತಾ ಮೊಯೆನ್ ಥಾಮ್ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಖಮೇರ್ ಸಾಮ್ರಾಜ್ಯದ ವಾಸ್ತುಶಿಲ್ಪಕ್ಕೆ ಒಂದು ಉತ್ತಮ ಉದಾಹರಣೆಯಾಗಿದ್ದು, ಶಿವನಿಗೆ ಅರ್ಪಿತವಾಗಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳು, ತೀರ್ಥಯಾತ್ರೆಗಳು ಮತ್ತು ಪ್ರಾರ್ಥನೆಗಳು ನಡೆಯುತ್ತಿದ್ದವು, ಇದು ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ್ದಾಗಿತ್ತು.
ಭೌಗೋಳಿಕ ಮಹತ್ವವೇನು?
ದೇವಾಲಯವನ್ನು ಡಾಂಗ್ರೆಕ್ ಪರ್ವತಗಳಲ್ಲಿರುವ ಒಂದು ಕಣಿವೆಯಲ್ಲಿ ನಿರ್ಮಿಸಲಾಗಿದೆ, ಇದು ಥೈಲ್ಯಾಂಡ್ನ ಖೋರಾಟ್ ಪ್ರಸ್ಥಭೂಮಿ ಮತ್ತು ಕಾಂಬೋಡಿಯಾದ ಬಯಲು ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈ ಸ್ಥಳವು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಕಾರ್ಯತಂತ್ರದ ದೃಷ್ಟಿಕೋನದಿಂದಲೂ ಮುಖ್ಯವಾಗಿದೆ. ಈ ಸ್ಥಳದಿಂದ ಗಡಿಯಾಚೆಗಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿದೆ. ಆದ್ದರಿಂದ, ಈ ಪ್ರದೇಶವು ಎರಡೂ ದೇಶಗಳಿಗೆ ಭದ್ರತಾ ದೃಷ್ಟಿಕೋನದಿಂದ ಸೂಕ್ಷ್ಮವಾಗಿದೆ. ಇದಕ್ಕಾಗಿಯೇ ಎರಡೂ ದೇಶಗಳು ಈ ದೇವಾಲಯ ಪ್ರದೇಶದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಲು ಬಯಸುತ್ತವೆ.
ದೇವಾಲಯದ ವಾಸ್ತುಶಿಲ್ಪದ ವೈಶಿಷ್ಟ್ಯಗಳು
ಪ್ರಸಾದ್ ತಾ ಮೊಯೆನ್ ಥಾಮ್ ದೇವಾಲಯವು ಖಮೇರ್ ವಾಸ್ತುಶಿಲ್ಪ ಶೈಲಿಯ ಒಂದು ಮೇರುಕೃತಿಯಾಗಿದೆ. ಇದನ್ನು ಮುಖ್ಯವಾಗಿ ಲ್ಯಾಟರೈಟ್ ಎಂದು ಕರೆಯಲ್ಪಡುವ ಬಲವಾದ ಮತ್ತು ಬಾಳಿಕೆ ಬರುವ ಜೇಡಿಮಣ್ಣಿನಿಂದ ನಿರ್ಮಿಸಲಾಗಿದೆ.ಆದರೆ ಕೆಲವು ಭಾಗಗಳಲ್ಲಿ ಮರಳುಗಲ್ಲನ್ನು ಸಹ ಬಳಸಲಾಗಿದೆ. ಈ ದೇವಾಲಯವು ಆಯತಾಕಾರದ ಆಕಾರದಲ್ಲಿದೆ ಮತ್ತು ಇದರ ಮುಖ್ಯ ದ್ವಾರವು ದಕ್ಷಿಣದ ಕಡೆಗೆ ತೆರೆದುಕೊಳ್ಳುತ್ತದೆ, ಇದು ಖಮೇರ್ ದೇವಾಲಯಗಳಲ್ಲಿ ಅಸಾಮಾನ್ಯವೆಂದು ಪರಿಗಣಿಸಲಾಗಿದೆ, ಏಕೆಂದರೆ ಹೆಚ್ಚಿನ ಖಮೇರ್ ದೇವಾಲಯಗಳು ಪೂರ್ವಕ್ಕೆ ಮುಖ ಮಾಡಿವೆ.
ವಿವಾದ ಹೇಗೆ ಆರಂಭವಾಯಿತು?
ಫೆಬ್ರವರಿ 2025 ರಲ್ಲಿ, ಕೆಲವು ಕಾಂಬೋಡಿಯನ್ ಸೈನಿಕರು ದೇವಾಲಯದ ಬಳಿ ತಲುಪಿ ಅಲ್ಲಿ ನಿಂತು ತಮ್ಮ ರಾಷ್ಟ್ರಗೀತೆಯನ್ನು ಹಾಡಲು ಪ್ರಾರಂಭಿಸಿದರು. ಅಲ್ಲಿದ್ದ ಥಾಯ್ ಸೈನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಎರಡೂ ಕಡೆಯವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಥಾಯ್ ಪ್ರಜೆಯೊಬ್ಬರು ಈ ಇಡೀ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದು ವಿಷಯವನ್ನು ಮತ್ತಷ್ಟು ಉಲ್ಬಣಗೊಳಿಸಿತು.
ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಗುರುತು
ಇಂದು ಈ ದೇವಾಲಯವನ್ನು ಕಾಂಬೋಡಿಯಾದ ಖಮೇರ್ ಸಾಂಸ್ಕೃತಿಕ ಪರಂಪರೆಯ ಸಂಕೇತವೆಂದು ಪರಿಗಣಿಸಲಾಗಿದೆ. ಕಾಂಬೋಡಿಯನ್ ಸರ್ಕಾರ ಇದನ್ನು ಪ್ರವಾಸೋದ್ಯಮಕ್ಕಾಗಿ ಪ್ರಚಾರ ಮಾಡುತ್ತದೆ ಮತ್ತು ಅದನ್ನು ತನ್ನ ಸಂಸ್ಕೃತಿಯ ಸಂಕೇತವಾಗಿ ಪ್ರಸ್ತುತಪಡಿಸುತ್ತದೆ. ಆದಾಗ್ಯೂ, ಈ ಪ್ರದೇಶವು ಇನ್ನೂ ಸೂಕ್ಷ್ಮವಾಗಿರುವುದರಿಂದ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಗುರುತಿನ ಚೀಟಿಯನ್ನು ತೆಗೆದುಕೊಂಡು ಸ್ಥಳೀಯ ಪಡೆಯಿಂದ ಅನುಮತಿ ಪಡೆಯುವುದು ಸೂಕ್ತ.
