ಮಕ್ಕಳ ಬದುಕಿಗೆ ಜೈಲಿನ ಗಡಿ: ತಿಹಾರ್ನಲ್ಲಿ ತಮ್ಮ ತಾಯಂದಿರ ಜೊತೆಗೆ 31 ಸೆರೆಯಲ್ಲಿರುವ ಮಕ್ಕಳು

ಹೊಸದಿಲ್ಲಿ: ಬಯಲಿನಲ್ಲಿ ಅಥವಾ ಉದ್ಯಾನವನದಲ್ಲಿ ಆಟವಾಡಿ ಬೆಳೆಯಬೇಕಾಗಿದ್ದ ಮಕ್ಕಳು, ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಅಪರಾಧಿಗಳೆಂದು ಘೋಷಿತರಾಗಿ, ತಿಹಾರ್ ಜೈಲಿನಲ್ಲಿ ಸೆರವಾಸ ಅನುಭವಿಸುತ್ತಿರುವ ತಮ್ಮ ತಾಯಂದಿರೊಂದಿಗೆ ಸರಳುಗಳು ಹಾಗೂ ಸಮವಸ್ತ್ರಧಾರಿ ಜೈಲು ಸಿಬ್ಬಂದಿಗಳ ಹಿಂದೆ ಕಳೆಯಬೇಕಾದ ದಾರುಣ ಸ್ಥಿತಿ ಬಂದೊದಗಿದೆ.

ಇಂತಹ 31 ಮಕ್ಕಳ ಆರೈಕೆಯನ್ನು ತಿಹಾರ್ ಜೈಲಿನ ಸಿಬ್ಬಂದಿಗಳೇ ನೋಡಿಕೊಳ್ಳುತ್ತಿರುವ ಅಪರೂಪದ ವಿದ್ಯಮಾನ ವರದಿಯಾಗಿದೆ.
ಸದ್ಯ ದಿಲ್ಲಿಯ ಭಾರಿ ಭದ್ರತೆಯ ತಿಹಾರ್ ಹಾಗೂ ಮಂಡೋಲಿ ಜೈಲುಗಳಲ್ಲಿ ಕೈದಿಗಳಾಗಿ ಜೀವಿಸುತ್ತಿರುವ ತಮ್ಮ ತಾಯಂದಿರೊಂದಿಗೆ ಇಂತಹ ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ಒಟ್ಟು 31 ಮಂದಿ ಮಕ್ಕಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಈ ಮಕ್ಕಳು ತಮ್ಮ ಜನನದ ಸನ್ನಿವೇಶದಿಂದ ತೊಂದರೆಗೀಡಾಗದಂತೆ ತಿಹಾರ್ ಜೈಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.
“ಪ್ಲೇಸ್ಕೂಲ್ ಗಳಿಂದ ನಿಯಮಿತ ವೈದ್ಯಕೀಯ ತಪಾಸಣೆ ಹಾಗೂ ಲಸಿಕೆ ನೀಡಿಕೆ ಸೇರಿದಂತೆ ಮಕ್ಕಳ ಎಲ್ಲ ಅಗತ್ಯಗಳ ಕಾಳಜಿಯನ್ನು ವಹಿಸಲಾಗುತ್ತಿದೆ. ಅವರ ಮೂಲಭೂತ ಅಭಿವೃದ್ಧಿ ಅಗತ್ಯಗಳು ಪೂರೈಕೆಯಾಗುವಂತಹ ವಾತಾವರಣವನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಏಶ್ಯದ ಬೃಹತ್ ಜೈಲು ಸಂಕೀರ್ಣವಾದ ತಿಹಾರ್ ನಲ್ಲಿ ಸದ್ಯ ಸುಮಾರು 19,000 ಕೈದಿಗಳನ್ನಿಡಲಾಗಿದ್ದು, ಈ ಪೈಕಿ ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷೆಗೊಳಗಾದ ಕೈದಿಗಳು ಸೇರಿದಂತೆ ಒಟ್ಟು 506 ಮಹಿಳಾ ಕೈದಿಗಳನ್ನು ಜೈಲು ಸಂಖ್ಯೆ 6ರಲ್ಲಿ ಇಡಲಾಗಿದೆ. ಉಳಿದ 237 ಮಹಿಳಾ ಕೈದಿಗಳನ್ನು ಜೈಲು ಸಂಖ್ಯೆ 16 ಎಂದೇ ಕರೆಯಲಾಗುವ ಮಂಡೋಲಿ ಜೈಲಿನಲ್ಲಿಡಲಾಗಿದೆ. ಜೈಲು ಮೂಲಗಳ ಪ್ರಕಾರ, ಜೈಲು ಸಂಖ್ಯೆ 6ರಲ್ಲಿ ನಾಲ್ವರು ಬಾಲಕರು ಹಾಗೂ 11 ಬಾಲಕಿಯರಿದ್ದರೆ, ಜೈಲು ಸಂಖ್ಯೆ 6ರಲ್ಲಿ ನಾಲ್ವರು ಬಾಲಕರು ಹಾಗೂ ಆರು ಬಾಲಕಿಯರಿದ್ದಾರೆ.
ಈ ಮಕ್ಕಳಿಗೆ ಆರು ವರ್ಷಗಳಾಗುವವರೆಗೆ ಮಾತ್ರ ಸೆರೆವಾಸದಲ್ಲಿರುವ ತಮ್ಮ ತಾಯಂದಿರೊಂದಿಗೆ ನೆಲೆಸಲು ಅನುಮತಿ ನೀಡಲಾಗುತ್ತದೆ. ಬಳಿಕ ಅವರ ತಾಯಂದಿರ ಸೆರೆವಾಸ ಶಿಕ್ಷೆಯ ಸ್ಥಿತಿ ಏನೇ ಆಗಿದ್ದರೂ, ಅದರ ನಂತರ ತಮ್ಮ ತಾಯಂದಿರೊಂದಿಗೆ ನೆಲೆಸಲು ಆ ಮಕ್ಕಳಿಗೆ ಯಾವುದೇ ಅನುಮತಿ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ಓರ್ವ ಅಧಿಕಾರಿ, “ನಾವು ಆ ಮಕ್ಕಳ ಆರೈಕೆಯನ್ನು ನೋಡಿಕೊಳ್ಳುವಂತೆ ಮಹಿಳಾ ಕೈದಿಗಳ ಸಂಬಂಧಿಕರಿಗೆ ಮನವಿ ಮಾಡುತ್ತೇವೆ. ಆದರೆ, ಕೆಲವು ನಿದರ್ಶನಗಳಲ್ಲಿ ಈ ಮಕ್ಕಳ ಆರೈಕೆಯನ್ನು ನೋಡಿಕೊಳ್ಳಲು ಅವರ ಸಂಬಂಧಿಕರೂ ಬಯಸದಿದ್ದಾಗ, ಆ ಮಕ್ಕಳು ಜೈಲಿನಿಂದ ಹೊರಗಿದ್ದಾಗಲೂ, ಅವರಿಗೆ ಆರೈಕೆ ದೊರೆಯುವುದನ್ನು ಮುಂದುವರಿಸಲು ನಾವು ಅಂತಹ ಮಕ್ಕಳನ್ನು ಮಕ್ಕಳ ಆರೈಕೆ ಕೇಂದ್ರ ಅಥವಾ ಸರಕಾರೇತರ ಸಂಸ್ಥೆಗಳ ವಶಕ್ಕೆ ಒಪ್ಪಿಸುತ್ತೇವೆ” ಎಂದು ಹೇಳುತ್ತಾರೆ.
ಆ ಮಕ್ಕಳು ತಮ್ಮ ಶೈಕ್ಷಣಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಗುರಿಗಳನ್ನು ಸಾಧಿಸಲು ಹಾಗೂ ಅವರು ತಮ್ಮ ಪೋಷಕರ ಸೆರೆವಾಸದಿಂದ ಸಂತ್ರಸ್ತರಾಗುವುದನ್ನು ತಪ್ಪಿಸುವ ಮೂಲಕ, ಅವರು ಸಮಗ್ರ ಅಭಿವೃದ್ಧಿ ಹೊಂದುವುದನ್ನು ಖಾತರಿಪಡಿಸಲು ನಾವು ವಿವಿಧ ಬಗೆಯಲ್ಲಿ ಮಧ್ಯಪ್ರವೇಶಿಸುತ್ತೇವೆ ಎಂದೂ ಅವರು ತಿಳಿಸುತ್ತಾರೆ.
ಜೈಲಿನೊಳಗಿರುವ ಪ್ರಮಾಣೀಕೃತ ಲಸಿಕಾ ಕೇಂದ್ರವು ಬಿಸಿಜಿ, ಪೋಲಿಯೊ, ಹೆಪಟೈಟಿಸ್, ಡಿಪಿಟಿ ಹಾಗೂ ಟೆಟನಸ್ ಸೇರಿದಂತೆ ಎಲ್ಲ ಅತ್ಯಗತ್ಯ ಲಸಿಕೆಗಳು ಮಕ್ಕಳಿಗೆ ಸಕಾಲಕ್ಕೆ ದೊರೆಯುವುದನ್ನು ಖಾತರಿ ಪಡಿಸುತ್ತಿವೆ ಎಂದು ಮತ್ತೊಬ್ಬ ಜೈಲು ಅಧಿಕಾರಿ ಹೇಳುತ್ತಾರೆ.
ಮಕ್ಕಳ ಆರೋಗ್ಯ ಆರೈಕೆಯೆಡೆಗಿನ ಈ ಸಕಾರಾತ್ಮಕ ಧೋರಣೆಯು, ಮಕ್ಕಳ ಸ್ವಾಸ್ಥ್ಯವನ್ನು ಸಂರಕ್ಷಿಸುತ್ತಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಈ ಮಕ್ಕಳಿಗೆ ಮುಂಚಿತ ಶಿಕ್ಷಣ ಹಾಗೂ ಮಾನಸಿಕ ಬೆಂಬಲವನ್ನು ಒದಗಿಸಲು ತಿಹಾರ್ ಜೈಲು ಪ್ರಾಧಿಕಾರಗಳು ಸರಕಾರೇತರ ಸಂಸ್ಥೆಗಳು ಹಾಗೂ ಮಕ್ಕಳ ಕಲ್ಯಾಣ ಇಲಾಖೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಮಕ್ಕಳ ಮನಸ್ಸಿನ ಮೇಲಾಗುವ ಜೈಲುವಾಸದ ಮಾನಸಿಕ ಪರಿಣಾಮವನ್ನು ತಗ್ಗಿಸುವುದು ಹಾಗೂ ಜೈಲಿನ ಹೊರಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಅವರನ್ನು ಸನ್ನದ್ಧಗೊಳಿಸುವುದು ಈ ಕ್ರಮದ ಗುರಿಯಾಗಿದೆ.
“ನಾವು ಅವರ ಬದುಕಿನ ಆರಂಭವನ್ನು ಬದಲಿಸಲು ಸಾಧ್ಯವಾಗದಿರಬಹುದು. ಆದರೆ, ಅವರು ಸಾಮಾನ್ಯ ಜೀವನ ನಡೆಸುವಂತಾಗಲು ಒಂದು ಅವಕಾಶ ನೀಡಬೇಕು ಎಂಬುದರ ಕುರಿತು ಬದ್ಧತೆ ಹೊಂದಿದ್ದೇವೆ” ಎಂದು ಅವರು ಹೇಳುತ್ತಾರೆ.