ಮದುವೆ ಖರ್ಚಿಗೆ ದರೋಡೆ!: ಒಡಿಶಾ ಯುವಕನ ನಿಗೂಢ ಕೃತ್ಯ ಭೇದಿಸಿದ ಸುಬ್ರಹ್ಮಣ್ಯನಗರ ಪೊಲೀಸರು

ಬೆಂಗಳೂರು: ನಾಲ್ಕು ದಿನಗಳ ಕಾಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಕರೆ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸುಬ್ರಹ್ಮಣ್ಯನಗರ ಪೊಲೀಸರು ಹದಿನೈದು ದಿನಗಳ ಹಿಂದೆ ಉತ್ತರ ಬೆಂಗಳೂರಿನ ಪಬ್‌ನಲ್ಲಿ ನಡೆದ ನಿಗೂಢ ಕಳ್ಳತನದ ಪ್ರಕರಣವನ್ನು ಭೇದಿಸಿದ್ದಾರೆ.

ಮೇ 12 ರಂದು ರಾಜಾಜಿನಗರದ ಜಿಯಾಮೆಟ್ರಿ ಬ್ರೂವರಿ ಮತ್ತು ಕಿಚನ್‌ನಲ್ಲಿ ನಡೆದ ದರೋಡೆಗೆ ಸಂಬಂಧಿಸಿದಂತೆ ಒಡಿಶಾದ 29 ವರ್ಷದ ಬಿಕಾಂ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮಾಲಿಪುರಂ ದಿಲೀಪ್ ಕುಮಾರ್ ಅಲಿಯಾಸ್ ತುಟ್ಟು ಎಂದು ಗುರುತಿಸಲಾಗಿದ್ದು, ಈತ ಒಡಿಶಾದ ಜಾಜ್‌ಪುರದ ನಿವಾಸಿ. ಆರೋಪಿ ತನ್ನ ತಂಗಿ ಮದುವೆಗೆ ಹಣ ಸಂಗ್ರಹಿಸಲು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಬ್‌ನಿಂದ 50,000 ರೂ. ನಗದು ಕಳ್ಳತನ ಮಾಡಿದ ನಂತರ, ಒಡಿಶಾಗೆ ಹೋದ ಆರೋಪಿ ಮೇ 14 ರಂದು ನಡೆದ ಮದುವೆಗೆ ಹಣವನ್ನು ಖರ್ಚು ಮಾಡಿದ್ದಾನೆ.
ಮೇ 16 ರಂದು ಆತನ ಹುಟ್ಟೂರು ಜಾಜ್‌ಪುರದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದರೋಡೆಗೆ ಬಳಸಿದ ಕಟಿಂಗ್ ಪ್ಲೇಯರ್ ಮತ್ತು 6,000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನ ಬಳಿ ಬಂದೂಕು ಪತ್ತೆಯಾಗಿಲ್ಲ.
ಪೊಲೀಸರು ಸುತ್ತಮುತ್ತಲಿನ 150ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಿದ್ದರು. ಜಾಜ್‌ಪುರದ ಸ್ಥಳೀಯ ನ್ಯಾಯಾಲಯದ ಮುಂದೆ ಆತನನ್ನು ಹಾಜರುಪಡಿಸಿದ ನಂತರ, ಮರುದಿನ ರಾತ್ರಿ ಪೊಲೀಸರು ಆತನನ್ನು ನಗರಕ್ಕೆ ಕರೆತಂದರು.
2016 ರಲ್ಲಿ, ಆರೋಪಿಯು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದನು. ಆತ ಜಯನಗರ ಮತ್ತು ಜೆಪಿ ನಗರ ಪ್ರದೇಶಗಳಲ್ಲಿನ ಪಬ್‌ಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. 2021ರಲ್ಲಿ, ಕಳ್ಳತನ ಮಾಡಲು ಯತ್ನಿಸಿದ ನಂತರ ಕೋರಮಂಗಲ ಪೊಲೀಸರು ಆತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ, ಆತ ಮತ್ತೆ ಜಯನಗರದ ವಿವಿಧ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು’.
‘ಕಡಿಮೆ ಸಂಬಳದ ಕಾರಣ ಕಳೆದ ವರ್ಷ ಕೆಲಸ ಬಿಟ್ಟು ಒಡಿಶಾಗೆ ಮರಳಿದ್ದ ಆತ ನವೆಂಬರ್‌ನಲ್ಲಿ ಮತ್ತೆ ನಗರಕ್ಕೆ ಬಂದು ಜೆಪಿ ನಗರದ ಹೋಟೆಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಜೆಪಿ ನಗರದಲ್ಲಿ ರೂಂನಲ್ಲಿ ತಂಗಿದ್ದನು. 2025ರ ಮಾರ್ಚ್‌ನಲ್ಲಿ, ಆತ ಕೆಲಸ ಬಿಟ್ಟು ಬೇರೆಡೆ ಕೆಲಸ ಹುಡುಕಲು ಪ್ರಾರಂಭಿಸಿದನು. ಮದುವೆಗೆ ಹಣ ಹೊಂದಿಸಲು ಒತ್ತಡ ಹೆಚ್ಚಾದ ಕಾರಣ, ಕಳ್ಳತನ ಮಾಡಲು ನಿರ್ಧರಿಸಿದ ಆತ ಜಿಯೊಮೆಟ್ರಿ ಪಬ್‌ನಲ್ಲಿ ದರೋಡೆ ಮಾಡಿದ್ದನು’ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾದ ಆರೋಪಿಯನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಕೇಳದ ಕಾರಣ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ.
