ಚಹಾ ಲಹರಿಯಲ್ಲಿ ಬದುಕು ಬದಲಿಸಿದ ಹೊಸ ತಲೆಮಾರು!

ಉನ್ನತ ಶಿಕ್ಷಣ ಪಡೆದವರು ಕೂಡ ಚಹಾ ಮಳಿಗೆಗಳನ್ನು ಆರಂಭಿಸುವ ಮೂಲಕ, ಹೊಸ ಬ್ರಾಯಂಡ್ಗಳನ್ನು ಎತ್ತರಕ್ಕೆ ಬೆಳೆಸುತ್ತಿದ್ದಾರೆ.

ಮಾಡೆಲ್ ಚಾಯ್ವಾಲಿ
‘ಮಿಸ್ ಗೋರಖಪುರ್’ ಆಗಿ (2018) ಖ್ಯಾತಿ ಪಡೆದಿದ್ದ ಸಿಮ್ರನ್ ಗುಪ್ತಾ (27) ಈಗ ಮಾಡೆಲ್ ಚಾಯ್ವಾಲಿ ಆಗಿ ಪ್ರಸಿದ್ಧರು. ಕೋವಿಡ್ ಸಮಯದಲ್ಲಿ ಕೆಲಸ ಇಲ್ಲದ್ದರಿಂದ ಲಾಕ್ಡೌನ್ ತೆರವಾದ ಬಳಿಕ ‘ಮಾಡೆಲ್ ಚಾಯ್ವಾಲಿ’ ಹೆಸರಿನಲ್ಲಿ ಉತ್ತರಪ್ರದೇಶದ ಗೋರಖಪುರದಲ್ಲಿ ಅಂಗಡಿ ಆರಂಭಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಅಂಗಡಿ ತೆರೆಯುವ ಮುನ್ನವೇ ಗ್ರಾಹಕರು ಚಹಾಗಾಗಿ ಕಾದು ನಿಂತಿರುತ್ತಾರೆ. ಮನೆಯಲ್ಲಿ ಸೋದರ ಅಂಗವಿಕಲನಾಗಿದ್ದು, ತಂದೆಗೆ ವಯಸ್ಸಾಗಿದೆ. ಹೀಗಾಗಿ ಕುಟುಂಬ ನಿರ್ವಹಣೆಗೆ ಈ ಅಂಗಡಿ ಆರಂಭಿಸಿದ್ದು, ಬೆಳವಣಿಗೆ ಖುಷಿ ತಂದಿದೆ ಎನ್ನುತ್ತಾರೆ ಸಿಮ್ರನ್. ಮನೆಯಲ್ಲಿ ಅಮ್ಮ-ಮಗಳು ಸೇರಿ ತಯಾರಿಸುವ ವಿಶೇಷ ‘ಚಹಾ ಮಸಾಲಾ’ಗೆ ಕೂಡ ಭಾರಿ ಬೇಡಿಕೆ ಇದೆ.
ಕೀಳರಿಮೆಯಲ್ಲ, ಹೆಗ್ಗಳಿಕೆ
‘ಚಹಾ ಮಾರಾಟ ಮಾಡುವುದು’ ಎಂದರೆ ಮೊದಲು ಕೀಳರಿಮೆ ಎಂದು ತಿಳಿಯಲಾಗುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಬಾಲ್ಯದಲ್ಲಿ ತಂದೆಯೊಡನೆ ಗುಜರಾತಿನ ಮಣಿನಗರ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಸಂಗತಿಯನ್ನು ಹಲವು ಬಾರಿ ಪ್ರಸ್ತಾಪಿಸಿದ್ದಲ್ಲದೆ, ‘ಚಹಾವಾಲಾ ಹುಡುಗ ಈ ದೇಶದ ಪ್ರಧಾನಿ ಹುದ್ದೆಯನ್ನೂ ಏರಬಲ್ಲ’ ಎಂದು ಸ್ಪೂರ್ತಿಯ ಮಾತುಗಳನ್ನಾಡಿ ದರು. ಅಲ್ಲದೆ, ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಹೊಸ ರೂಪವನ್ನು ನೀಡಿ, ಮತದಾರರೊಂದಿಗೆ ಸಂವಾದ ನಡೆಸಲು ‘ಚಾಯ್ ಪೇ ಚರ್ಚಾ’ ಕಾರ್ಯಕ್ರಮಗಳನ್ನು ಸರಣಿಯಾಗಿ ನಡೆಸಿದರು. ಇದರಿಂದ ಪ್ರೇರಿತಗೊಂಡ ಹಲವರು ಚಹಾ ಮಾರಾಟವನ್ನೇ ವೃತ್ತಿಯಾಗಿಸಿಕೊಂಡ ನಿದರ್ಶನಗಳು ಕಂಡುಬಂದವು.
ಎಂಬಿಎ ಚಾಯ್ವಾಲಾ
ಪ್ರಫುಲ್ ಬಿಲ್ಲೋರಿ (27) ಎಂಬಿಎ ಓದಿದವರಲ್ಲ. ಆದರೆ, ಇಲ್ಲಿ ಎಂಬಿಎ ಎಂದರೆ’Mr. Billorie Ahmedabad Chaiwala’ ತಂದೆಯಿಂದ 10 ಸಾವಿರ ರೂ. ನೆರವು ಪಡೆದು ಅಹಮದಾಬಾದ್ನಲ್ಲಿ ಸಣ್ಣ ಚಹಾ ಅಂಗಡಿ ಆರಂಭಿಸಿದ ಪ್ರಫುಲ್ ಬಹುಬೇಗ ಗ್ರಾಹಕರ ವಿಶ್ವಾಸ ಗಳಿಸಿದರು. ಆದರೆ, ಕೆಲ ಜನರ ಕಿರುಕುಳದಿಂದ ಮೊದಲ ಅಂಗಡಿಯನ್ನು ಬಂದ್ ಮಾಡಬೇಕಾಯಿತು. ಬಳಿಕ ನಗರದ ಆಸ್ಪತ್ರೆಯೊಂದರ ಹೊರಗಡೆ ಚಹಾ ಅಂಗಡಿ ಆರಂಭಿಸಿದರು. ಇಲ್ಲಿಯ ಚಹಾ ರುಚಿಗೆ ಗ್ರಾಹಕರು ‘ಆಹಾ!’ ಎಂಬ ಉದ್ಗಾರ ಫ್ರಫುಲ್ ಅವರ ವಿಶ್ವಾಸವನ್ನು ಹೆಚ್ಚಿಸಿತು. ಹಾಗಾಗಿ, ‘ಎಂಬಿಎ ಚಾಯ್ವಾಲಾ’ ಬ್ರಾಯಂಡ್ನ್ನು ಎತ್ತರಕ್ಕೆ ಏರಿಸಿದ ಪ್ರಫುಲ್ ಪ್ರಸ್ತುತ 100ಕ್ಕೂ ಹೆಚ್ಚು ಔಟ್ಲೆಟ್ಸ್ (ಮಳಿಗೆಗಳು) ಮತ್ತು 1 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದ್ದಾರೆ.
ಇಂಜಿನಿಯರ್ ಚಾಯ್ವಾಲಾ!
ಮಧ್ಯಪ್ರದೇಶದ ಛಿಂದವಾಡಾದಲ್ಲಿರುವ ಅಂಕಿತ್ ನಾಗವಂಶಿ (34) ಮುಂಬೈ ಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಕಚೇರಿಯ ‘9 ಟು 5’ ಏಕತಾನತೆಯಿಂದ ಬೇಸತ್ತು ಸ್ವಂತದ್ದು ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು. 2019ರಲ್ಲಿ ನೌಕರಿಗೆ ರಾಜೀನಾಮೆ ನೀಡಿ ಛಿಂದ್ವಾಡಾಗೆ ಮರಳಿ, 2020ರಲ್ಲಿ ‘ಇಂಜಿನಿಯರ್ ಚಾಯ್ವಾಲಾ’ ಹೆಸರಿನಲ್ಲೇ ಚಹಾ ಅಂಗಡಿ ಆರಂಭಿಸಿದ್ದು, ಈಗ ಈ ನಗರ ಮಾತ್ರವಲ್ಲ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಪ್ರಸಿದ್ಧವಾಗಿದೆ. ಇಲ್ಲಿನ ಮಸಾಲಾ ಚಹಾ ಮತ್ತು ಇಮ್ಯುನಿಟಿ ಚಹಾ (ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ) ರುಚಿಗೆ ಮನಸೋಲದವರಿಲ್ಲ. ಅಂಕಿತ್ ಸಹೋದರಿ ರೋಶನಿ ಈಗ ಎಂಬಿಎ ವ್ಯಾಸಂಗ ಪೂರ್ಣಗೊಳಿಸಿದ್ದು, ಅಣ್ಣನ ಈ ಸಣ್ಣ ಉದ್ಯಮ ವಿಸ್ತರಿಸುವ ಯೋಜನೆ ರೂಪಿಸಿದ್ದಾರೆ.’ಇಂಜಿನಿಯರ್ ಚಾಯ್ವಾಲಾ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಏಕೆಂದರೆ, ನಾನು ಸ್ವತಂತ್ರವಾಗಿ ಬದುಕುತ್ತಿದ್ದು, ಇತರರಿಗೂ ಕೆಲಸ ನೀಡಿದ್ದೇನೆ. ಗ್ರಾಹಕರ ಸಂತೃಪ್ತಿಯ ನಗು ನನಗೆ ಎಲ್ಲಕ್ಕಿಂತ ಮಿಗಿಲಾದದ್ದು’ ಎನ್ನುತ್ತಾರೆ ಅಂಕಿತ್.
ನೇಹಾಳ ಆತ್ಮಸ್ಥೈರ್ಯ
ಗುಜರಾತ್ ಅಹಮದಾಬಾದ್ನ ನೇಹಾ ಭಟ್ ಪದವಿ ಪೂರ್ಣಗೊಳಿಸಿದ ಬಳಿಕ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2021ರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಒಂದು ಕಾಲನ್ನು ಕಳೆದುಕೊಂಡರು. ಹಲವು ಶಸ್ತ್ರಚಿಕಿತ್ಸೆಗಳಿಗಾಗಿ 2 ತಿಂಗಳು ಆಸ್ಪತ್ರೆಯಲ್ಲೇ ಇರಬೇಕಾಯಿತು. ಬಳಿಕ ಕೃತಕ ಕಾಲು ಅಳವಡಿಸಿಕೊಂಡರಾದರೂ, ನೌಕರಿಗಾಗಿ ಅಲೆದು ಸುಸ್ತಾದರು. ಹಾಗಾಗಿ, ಮನೆಯ ಸದಸ್ಯರ ಸಹಾಯದಿಂದ ಅಹಮದಾಬಾದ್ನಲ್ಲೇ ‘ಅಂಪು ಟೀ’ ಎಂಬ ಸಣ್ಣ ಅಂಗಡಿ ಆರಂಭಿಸಿದರು. ಈಗ ಹಲವು ಸಹಾಯಕರನ್ನು ಕೆಲಸಕ್ಕೆ ನೇಮಿಸಿದ್ದು ದಿನಕ್ಕೆ ಸರಾಸರಿ ಐನೂರು ಕಪ್ ಚಹಾ ಮಾರಾಟ ಮಾಡುತ್ತಿದ್ದಾರೆ. ತಾವು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಜತೆಗೆ, ಇತರರಿಗೂ ಕೆಲಸ ನೀಡಿರುವ ಆತ್ಮತೃಪ್ತಿ ನೇಹಾ ಅವರದ್ದು. ‘ಅಂಪು ಟೀ’ ಬ್ರಾಯಂಡ್ನಲ್ಲೇ ಮತ್ತಷ್ಟು ಮಳಿಗೆಗಳನ್ನು ಆರಂಭಿಸಲು ಯೋಜನೆ ರೂಪಿಸಿದ್ದಾರೆ.
ಅಂಗವಿಕಲರಿಗೆ ಉದ್ಯೋಗ
ಪ್ರಿಯಾಂಕ್ ಪಟೇಲ್ (38) ಇಂಜಿನಿಯರಿಂಗ್ ಪದವೀಧರ. ಬಿ.ಟೆಕ್ ಬಳಿಕ ಪುಣೆಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದಾಗ ವರ್ಷಕ್ಕೆ ಏಳು ಲಕ್ಷದ ಪ್ಯಾಕೇಜ್ ಹಾಗೂ ಇನ್ನಿತರ ಸೌಲಭ್ಯಗಳು. ಒಂದಿಷ್ಟು ಸಮಯದ ಬಳಿಕ ಇದೆಲ್ಲ ಏಕತಾನತೆ ಎನಿಸತೊಡಗಿ ಏನಾದರೂ ವಿಶಿಷ್ಟವಾದದ್ದನ್ನು ಮಾಡಬೇಕು ಎಂಬ ತುಡಿತ ಕಾಡತೊಡಗಿತು. ಕೆಲಸಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರ ಹಾಗೂ ಒಡಿಶಾ ರಾಜ್ಯದ ಗ್ರಾಮಗಳಲ್ಲಿ ಸಮಾಜಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ದುಡಿಯುವ ಕೈಗಳಿಗೆ ಅದರಲ್ಲೂ ಸಮಾಜ ಉಪೇಕ್ಷಿಸುವ ಕಿವುಡ, ಮೂಗರಿಗೆ ಕೆಲಸ ನೀಡಬೇಕು ಎಂಬ ಆಶಯ ಮೊಳಕೆಯೊಡೆಯಿತು. ಹೊಸ ಕನಸನ್ನು ಹೊತ್ತು ಜಬಲಪುರ್ನಿಂದ ರಾಯಪುರ್ಗೆ ಬಂದಾಯಿತು. ಚಹಾ ಅಂಗಡಿಯನ್ನು ಹೊಸ ಸ್ವರೂಪದಲ್ಲಿ ತೆರೆದರೆ ಹೇಗೆ? ಎಂಬ ಚಿಂತನೆಯ ಬೆನ್ನು ಹತ್ತಿದರು.
ಜನರು ಆಗಲೇ ‘ಇಂಜಿನಿಯರಿಂಗ್ ಓದಿ ಟೀ ಸ್ಟಾಲ್ ತೆಗೆಯುವುದೇ’ ಎಂದು ಪ್ರಿಯಾಂಕ್ರನ್ನು ಹೀಯಾಳಿಸತೊಡಗಿದ್ದರು. ತಮ್ಮ ಕನಸನ್ನು ಸ್ಪಷ್ಟವಾಗಿಸಿಕೊಂಡಿದ್ದ ಪಟೇಲ್ ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ. ಇಂಟರ್ನೆಟ್ ಜಾಲಾಡಿ, ದೇಶದ ಹಲವು ನಗರಗಳಲ್ಲಿ ಸುತ್ತಾಡಿ ಬಂದಾಗ ಗೊತ್ತಾಗಿದ್ದು ಕಾಫಿಗೆಂದು ಸಾಕಷ್ಟು ತರಹದ ಅಡ್ಡೆಗಳಿವೆಯಾದರೂ, ಚಹಾಕ್ಕೆ ಆ ಬಗೆಯ ಜಾಗಗಳು ಇರೋದು ಕೆಲವೇ ಕೆಲವು ಎಂಬುದು. ಮತ್ತೆ ತಡ ಮಾಡಲಿಲ್ಲ. ‘ನುಕ್ಕಡ್ ಕೆಫೆ’ (ಹಿಂದಿಯಲ್ಲಿ ನುಕ್ಕಡ್ ಎಂದರೆ ರಸ್ತೆಯ ಮೂಲೆ) ಹೆಸರಿನಲ್ಲಿ ವಿನೂತನವಾದ ಟೀ ಸ್ಟಾಲ್ ರಾಯಪುರದ ಸಮತಾ ಕಾಲನಿಯಲ್ಲಿ 2013ರಲ್ಲಿ ತಲೆ ಎತ್ತಿತ್ತು. ನಗರ ಭಾಗದಲ್ಲಿದ್ದರೂ ಪೂರ್ತಿ ಹಳ್ಳಿಯ ವಾತಾವರಣ ನಿರ್ವಿುಸಲಾಯಿತು.
ಹಳ್ಳಿಕಟ್ಟೆಯಲ್ಲಿ ಕೂತು ಚಹಾ ಸವಿದಂತಹ ಅನುಭವ. ಒಂದಲ್ಲ, ಎರಡಲ್ಲ 20 ತರಹದ ಚಹಾ ಫ್ಲೇವರ್ಗಳು ಜತೆಗೆ ಈರುಳ್ಳಿ ಭಜ್ಜಿ, ಪಕೋಡಾ. ಕೆಫೆಯ ಆವರಣದಲ್ಲೇ ಪುಟ್ಟ ಗ್ರಂಥಾಲಯ. ಒಂದಿಷ್ಟು ಪುಸ್ತಕಗಳು, ಮ್ಯಾಗಜಿನ್ಗಳ ಸಂಗ್ರಹ ಇಲ್ಲಿದೆ. ಶೇಕಡ 70ರಷ್ಟು ಕೆಲಸಗಾರರು ಅಂಗವಿಕಲರು ಮತ್ತು ತೃತೀಯ ಲಿಂಗಿಗಳು. ಕೆಲಸಗಾರರು ಆರ್ಡರ್ ಪಡೆದ ಮೇಲೆ ಪಟೇಲ್ ಸ್ವತಃ ಗ್ರಾಹಕರಿಗೆ ಚಹಾ ಸರ್ವ್ ಮಾಡುತ್ತಾರೆ. ಹಳ್ಳಿಯ ನುಕ್ಕಡ್ಗಳು ಹೇಗೆ ಅಲ್ಲಿಯ ಜನರಿಗೆ ಪರಸ್ಪರರ ಕಷ್ಟ ಹಂಚಿಕೊಳ್ಳುವ ನೆಲೆಗಳಾಗಿವೆಯೋ ಈ ನುಕ್ಕಡ್ ಕೆಫೆಯನ್ನೂ ಅದೇ ರೀತಿಯಾಗಿಸಿರುವ ಪ್ರಿಯಾಂಕ್, ನುಕ್ಕಡ್ ಕೆಫೆಯ ಸಮೂಹವನ್ನು ಒಂದರಿಂದ 6 ಮಳಿಗೆಗಳಿಗೆ ವಿಸ್ತರಿಸಿದ್ದಾರೆ. 300ಕ್ಕೂ ಅಧಿಕ ಜನರಿಗೆ ಈ ಮೂಲಕ ಬದುಕು ನೀಡಿದ್ದಾರೆ.