ಅತಿವೇಗದ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಹೈದರಾಬಾದ್ನಲ್ಲಿ ಮೂವರು ದುರ್ಮರಣ

ಹೈದರಾಬಾದ್ : ನಿಧಾನವೇ ಪ್ರಧಾನ, ಅತಿ ವೇಗದಲ್ಲಿ ವಾಹನಗಳನ್ನು ಚಲಾಯಿಸಬೇಡಿ ಎಂದು ಎಷ್ಟೇ ಹೇಳಿದ್ರೂ ಕೂಡ ಹೆಚ್ಚಿನವರು ಈ ಸಂಚಾರ ನಿಯಮ ಗಳನ್ನು ಗಾಳಿಗೆ ತೂರಿ ವೇಗವಾಗಿ ವಾಹನ ಚಲಾಯಿಸುತ್ತಾರೆ. ಅತೀ ವೇಗದಿಂದ ವಾಹನಗಳನ್ನು ಓಡಿಸಿದ ಪರಿಣಾಮವಾಗಿ ಅದೆಷ್ಟೋ ರಣ ಭೀಕರ ಅಪಘಾತ ಗಳು ಸಂಭವಿಸಿವೆ. ಇಂತಹ ಸಾಕಷ್ಟು ಅಪಘಾತಗಳ ಬಗ್ಗೆ ದಿನನಿತ್ಯ ಸುದ್ದಿಗಳನ್ನು ಕೇಳುತ್ತೀರಿ. ಆದರೆ ಇದೀಗ ಹೈದರಾಬಾದ್ (Hyderabad) ನಗರ ವ್ಯಾಪ್ತಿಯ ಹಯಾತ್ನಗರ ಕಂಟ್ಲೂರಿ ನಲ್ಲಿ ಭಯಾನಕ ಅಪಘಾತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರೊಂದು, ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಭಯಾನಕ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೌದು, ಯಮವೇಗವಾಗಿ ಬರುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿಯ ಸ್ಥಿತಿಯೂ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರ ಮನೆಯ ಸಮಾರಂಭದಲ್ಲಿ ಭಾಗಿಯಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
@itz sagarreddy ಹೆಸರಿನ ಖಾತೆಯಲ್ಲಿ ಈ ಭಯಾನಕ ಅಪಘಾತದ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಡಿಕ್ಕಿ ಹೊಡೆಯುವ ಮೊದಲು ಕಾರು ಅತಿ ವೇಗದಲ್ಲಿ ಬರುತ್ತಿರುವುದನ್ನು ನೋಡಬಹುದು. ಢಿಕ್ಕಿ ಹೊಡೆದ ರಭಸಕ್ಕೆ ಕಾರು ತೀವ್ರವಾಗಿ ಹಾನಿಗೊಳಗಾಗಿದೆ. ಈ ವಾಹನದೊಳಗೆ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಒಂದೇ ಗ್ರಾಮದವರು ಎನ್ನಲಾಗಿದ್ದು, ಮೃತಪಟ್ಟವರನ್ನು ಚಂದ್ರಸೇನ ರೆಡ್ಡಿ, ತ್ರಿನಾದ್ ರೆಡ್ಡಿ ಮತ್ತು ವರ್ಷಿತ್ ರೆಡ್ಡಿ ಎಂದು ಗುರುತಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಅಪಘಾತಕ್ಕೆ ಅತಿ ವೇಗವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
