ವಿಶ್ವಸಂಸ್ಥೆ ವರದಿ: ಶೇ. 6.3ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ 2024–25ರಲ್ಲಿ ಭಾರತವೇ ವೇಗದ ಆರ್ಥಿಕತೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ವೇಗ ತುಸು ತಗ್ಗಬಹುದಾದರೂ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಈ ವರ್ಷ ಮುಂಚೂಣಿಯಲ್ಲಿರುತ್ತದೆ. ವಿಶ್ವಸಂಸ್ಥೆ ಮಾಡಿರುವ ಅಂದಾಜು ಪ್ರಕಾರ 2024-25ರಲ್ಲಿ ಭಾರತದ ಜಿಡಿಪಿ ದರ ಶೇ. 6.3ರಷ್ಟಿರಬಹುದು. ಹಿಂದಿನ ಸಲ ಮಾಡಿದ ಅಂದಾಜು ಪ್ರಕಾರ ಜಿಡಿಪಿ ದರ ಶೇ. 6.4 ಇರಬಹುದು ಎಂದಿತ್ತು. ಈಗ 10 ಮೂಲಾಂಕಗಳಷ್ಟು ದರವನ್ನು ತನ್ನ ಅಂದಾಜಿನಲ್ಲಿ ಇಳಿಸಿದೆ. ಜನವರಿಯಲ್ಲಿ ಮಾಡಿದ್ದ ಅಂದಾಜು ಪ್ರಕಾರ ಜಿಡಿಪಿ ಶೇ. 6.6ರಷ್ಟು ಬೆಳೆಯಬಹುದು ಎಂದಿತ್ತು.
ಆದರೆ, ಜಾಗತಿಕವಾಗಿ ಇರುವ ಆರ್ಥಿಕ ಹಿನ್ನಡೆಯ ವಾತಾವರಣವನ್ನು ಗಣನೆಗೆ ತೆಗೆದುಕೊಂಡರೆ ಭಾರತದ ಶೇ. 6.3 ಬೆಳವಣಿಗೆ ನಿಜಕ್ಕೂ ಗಮನಾರ್ಹವಾದುದು ಎಂಬುದು ವಿಶ್ವ ಸಂಸ್ಥೆಯ ವರದಿ ಈಗ ಮಾಡಿರುವ ಪ್ರಶಂಸೆ.
ವಿಶ್ವ ಸಂಸ್ಥೆಯು ನಿನ್ನೆ ಈ ವರ್ಷದ ಮಧ್ಯಭಾಗದ ವಿಶ್ವ ಆರ್ಥಿಕ ಸಂದರ್ಭ ಮತ್ತು ಅವಲೋಕನ (ಡಬ್ಲ್ಯುಇಎಸ್ಪಿ) ವರದಿ ಬಿಡುಗಡೆ ಮಾಡಿದೆ. ವಿಶ್ವ ಆರ್ಥಿಕತೆ ಈಗ ಬಹಳ ಸೂಕ್ಷ್ಮ ಗಳಿಗೆಯಲ್ಲಿದೆ. ವ್ಯಾಪಾರ ಕಗ್ಗಂಟು ಹೆಚ್ಚಿದೆ, ನೀತಿಯಲ್ಲಿ ಅನಿಶ್ಚಿತತೆ ಇದೆ. ಇವು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸಿದೆ ಎಂದು ಈ ವರದಿಯು ಎಚ್ಚರಿಸಿದೆ. ಇದರ ಪ್ರಕಾರ, ಈ ವರ್ಷ ಜಾಗತಿಕ ಆರ್ಥಿಕತೆ ಶೇ. 2.4ರಷ್ಟು ಬೆಳೆಯಬಹುದು. ಈ ಹಿನ್ನೆಲೆಯಲ್ಲಿ ಭಾರತದ ಅಭಿವೃದ್ಧಿ ದರ ಆಶಾದಾಯಕ ಎನಿಸುತ್ತದೆ.
ಚೀನಾದ ಆರ್ಥಿಕತೆ ಶೇ. 4.6, ಅಮೆರಿಕದ ಜಿಡಿಪಿ ಶೇ. 1.6, ಜಪಾನ್ನದ್ದು ಶೇ. 0.7, ಐರೋಪ್ಯ ಒಕ್ಕೂಟದ್ದು ಶೇ. 1ರಷ್ಟು ಬೆಳೆಯಬಹುದು. ಜರ್ಮನಿ ಮೈನಸ್ 0.1 ಪ್ರತಿಶತ ಬೆಳವಣಿಗೆ ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಶ್ರೀಮಂತ ದೇಶಗಳ ಆರ್ಥಿಕ ಬೆಳವಣಿಗೆ ಶೇ. 3ಕ್ಕಿಂತಲೂ ಕಡಿಮೆಯೇ ಇರಲಿದೆ.
ಭಾರತದಲ್ಲಿ ಹಣದುಬ್ಬರ, ನಿರುದ್ಯೋಗ ಸಮಸ್ಯೆಯಲ್ಲಿ ಸುಧಾರಣೆ
ವಿಶ್ವಸಂಸ್ಥೆಯ ಈ ವರದಿ ಪ್ರಕಾರ ಭಾರತದಲ್ಲಿ 2024ರಲ್ಲಿ ಶೇ. 4.9ರಷ್ಟು ಇದ್ದ ಹಣದುಬ್ಬರವು 2025ರಲ್ಲಿ ಶೇ. 4.3ಕ್ಕೆ ಇಳಿಯಬಹುದು. ಇದು ಆರ್ಬಿಐ ಹಾಕಿಕೊಂಡ ಶೇ. 4ರ ಹಣದುಬ್ಬರ ಗುರಿಯ ಸಮೀಪವೇ ಇದೆ. ಹೀಗಾಗಿ, ಭಾರತಕ್ಕೆ ಈ ವರ್ಷ ಬೆಲೆ ಏರಿಕೆ ಸಮಸ್ಯೆ ಹೆಚ್ಚಾಗಿ ಕಾಡದೇ ಹೋಗಬಹುದು.
ಇನ್ನು, ನಿರುದ್ಯೋಗ ಕೂಡ ಈ ವರ್ಷ ಹೆಚ್ಚು ಸಮಸ್ಯಾತ್ಮಕ ಎನಿಸುವುದಿಲ್ಲ. ಆರ್ಥಿಕತೆ ಸ್ಥಿರವಾಗಿರುವುದರಿಂದ ನಿರುದ್ಯೋಗ ಸಮಸ್ಯೆ ಕಾಡದೇ ಹೋಗಬಹುದು. ಆದರೆ, ಮಹಿಳೆಯರನ್ನು ಉದ್ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಒಳಗೊಳ್ಳುವ ಅವಶ್ಯಕತೆ ಇದೆ ಎಂದು ಈ ವರದಿಯಲ್ಲಿ ಸಲಹೆ ನೀಡಲಾಗಿದೆ.