ಆಪರೇಷನ್ ಸಿಂಧೂರ: ಚೀನಾದ ವಾಯು ರಕ್ಷಣಾ ವ್ಯವಸ್ಥೆ ಜಾಮ್ ಮಾಡಿ 23 ನಿಮಿಷದಲ್ಲಿ ದಾಳಿ ನಡೆಸಿದ ಭಾರತ

ನವದೆಹಲಿ: ಭಾರತೀಯ ವಾಯು ಸೇನೆ ಕೇವಲ 23 ನಿಮಿಷದಲ್ಲಿ ಚೀನಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಬೈಪಾಸ್, ಜಾಮ್ ಮಾಡಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದ ವಿಚಾರ ಈಗ ಬಳಕಿಗೆ ಬಂದಿದೆ.

ಹೌದು. ಭಾರತ ಮೇ 7ರ ಬುಧವಾರ ನಸುಕಿನ ಜಾವ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ 9 ಸ್ಥಳಗಳಲ್ಲಿದ್ದ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ನಡೆಸಿತ್ತು. ಈ ದಾಳಿಯನ್ನು ಹೇಗೆ ವ್ಯವಸ್ಥಿತವಾಗಿ ನಡೆಸಲಾಯಿತು ಎಂಬುದರ ಬಗ್ಗೆ ಭಾರತ ಸರ್ಕಾರವೇ ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿದೆ.
ದಾಳಿ ನಡೆಸಿದ್ದು ಹೇಗೆ?
ಭಾರತೀಯ ವಾಯು ಸೇನೆ ಈ ಬಾರಿ ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿರಲಿಲ್ಲ. ಭಾರತದ ಒಳಗಡೆಯಿಂದಲೇ ದಾಳಿ ನಡೆಸಿತ್ತು. ಈ ದಾಳಿ ಯಶಸ್ವಿಯಾಗಬೇಕಾದರೆ ಹಲವಾರು ಸವಾಲುಗಳಿತ್ತು.
ತನ್ನ ಆಪ್ತ ದೇಶವಾದ ಪಾಕಿಸ್ತಾನಕ್ಕೆ ಚೀನಾ HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ನೀಡಿತ್ತು. ಈ ವಾಯು ರಕ್ಷಣಾ ವ್ಯವಸ್ಥೆಯ ಬೇಧಿಸಿ ಭಾರತದ ಕ್ಷಿಪಣಿಗಳು ನಿಗದಿತ ಗುರಿಯನ್ನು ತಲುಪಬೇಕಿತ್ತು. ಸುಮಾರು 300 ಕಿ.ಮೀ ದೂರದಿಂದಲೇ ಬರುತ್ತಿರುವ ಕ್ಷಿಪಣಿ, ಡ್ರೋನ್, ಯುದ್ಧ ವಿಮಾನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ HQ-9 ಹೊಂದಿತ್ತು.
ಪಾಕಿಸ್ತಾನ ಲಾಹೋರ್ ಮತ್ತು ಇತರ ಸ್ಥಳಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಿತ್ತು. ಹೀಗಾಗಿ ದಾಳಿ ನಡೆಸುವ ಮೊದಲು ವಾಯು ಸೇನೆ ಮಾಡಿದ ಕೆಲಸ ಏನೆಂದರೆ ಬಹುಕೋಟಿ ವೆಚ್ಚದ ವಾಯು ರಕ್ಷಣಾ ವ್ಯವಸ್ಥೆಯನ್ನು ಬೈಪಾಸ್ ಮಾಡಿ ಜಾಮ್ ಮಾಡಿತ್ತು.
ವಾಯು ರಕ್ಷಣಾ ವ್ಯವಸ್ಥೆಯನ್ನು ಜಾಮ್ ಮಾಡಿದ ನಂತರ ಭಾರತ ಪಾಕಿಸ್ತಾನದ ಒಳಗಡೆ ಪ್ರವೇಶ ಮಾಡದೇ ಭಾರತದ ಒಳಗಡೆದಿಂದಲೇ ದಾಳಿ ನಡೆಸಿತು. ರಫೇಲ್ ಯುದ್ಧ ವಿಮಾನದ ಮೂಲಕ ಪಾಕ್ನಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದರೆ, ಪಾಕ್ ಆಕ್ರಮಿತ ಕಾಶ್ಮೀರದ ಒಳಗಡೆ ಇರುವ ಉಗ್ರರ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿ ಧ್ವಂಸ ಮಾಡಿತು.
ಈ ದಾಳಿಯ ಸಮಯದಲ್ಲಿ ಭಾರತ ತನ್ನ ಯಾವುದೇ ಸ್ವತ್ತುಗಳನ್ನು ನಷ್ಟವಾಗಿಲ್ಲ. ನಿಖರವಾಗಿ ಕಾರ್ಯಾಚರಣೆ ಮಾಡಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ ಎಂದು ಸರ್ಕಾರ ತಿಳಿಸಿದೆ.
ಪಾಕ್ನಿಂದ ಬರುತ್ತಿದ್ದ ಡ್ರೋನ್ ಮತ್ತು ಕ್ಷಿಪಣಿಗಳನ್ನು ತೊಡೆದು ಹಾಕಲು ಬರಾಕ್ -8 ಕ್ಷಿಪಣಿ ವ್ಯವಸ್ಥೆ, ಎಸ್ -400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಗಳು, ಆಕಾಶ್ ಕ್ಷಿಪಣಿ ವ್ಯವಸ್ಥೆ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ವಿರೋಧಿ ಉಪಕರಣಗಳನ್ನು ನಿಯೋಜಿಸಲಾಗಿತ್ತು. ಇದರಿಂದಾಗಿ ಮೇ 7 ರ ರಾತ್ರಿ 15 ಭಾರತೀಯ ನಗರಗಳ ಮೇಲೆ ದಾಳಿಗೆ ಮುಂದಾಗಿದ್ದ ಪಾಕ್ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಲಾಯಿತು ಎಂದು ಹೇಳಿದೆ.
ಅವಂತಿಪೋರಾ, ಶ್ರೀನಗರ, ಜಮ್ಮು, ಪಠಾಣ್ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲಿಯಾ, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ಪಾಕ್ ದಾಳಿ ಮಾಡಲು ಪ್ರಯತ್ನಿಸಿತು. ಇವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ತಟಸ್ಥಗೊಳಿಸಲಾಯಿತು.
ಮೇ 8 ರ ಬೆಳಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿದ್ದ ವಾಯು ರಕ್ಷಣಾ ರೇಡಾರ್ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯ ಪರಿಣಾಮ ಲಾಹೋರ್ನಲ್ಲಿದ್ದ ವಾಯು ರಕ್ಷಣಾ ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸಿತ್ತು.
ಆಪರೇಷನ್ ಸಿಂಧೂರದಲ್ಲಿ ಸ್ವದೇಶಿ ನಿರ್ಮಿತ ವ್ಯವಸ್ಥೆಗಳನ್ನು ಬಳಕೆ ಮಾಡಲಾಗಿದೆ. ಈ ಕಾರ್ಯಾಚರಣೆಯು ಮಿಲಿಟರಿ ಕಾರ್ಯಾಚರಣೆಗಳಲ್ಲಿ ತಾಂತ್ರಿಕ ಸ್ವಾವಲಂಬನೆಯತ್ತ ಸಾಗುತ್ತಿರುವ ಭಾರತದ ಪ್ರಯಾಣದಲ್ಲಿ ಒಂದು ದೊಡ್ಡ ಮೈಲಿಗಲ್ಲು ಎಂದು ಭಾರತ ಸರ್ಕಾರ ಬಣ್ಣಿಸಿದೆ.