ಕಲಬುರಗಿಯಲ್ಲಿ ಲಿಫ್ಟ್ ಕೈಕೊಟ್ಟ ಘಟನೆ: ಗೋಡೆ ಒಡೆದು 9 ಮಂದಿ ರಕ್ಷಣೆ

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ (GIMS) ಏಕಾಏಕಿ ಲಿಫ್ಟ್ ಕೈ ಕೊಟ್ಟಿದ್ದರಿಂದ ಲಿಫ್ಟ್ ಒಳಗೆ 9 ಮಂದಿ ಸಿಲುಕಿ ಪರದಾಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಲಿಫ್ಟ್ ದುರಸ್ತಿ ಆಗದ ಕಾರಣ ಡ್ರಿಲ್ಲಿಂಗ್ ಮಷಿನ್ ಬಳಸಿ ತಡೆಗೋಡೆಯನ್ನು ಒಡೆದು ಲಿಫ್ಟ್ ಒಳಗಿದ್ದವರನ್ನು ರಕ್ಷಿಸಲಾಗಿದೆ.
ಲಿಫ್ಟ್ ಒಳಗೆ ಸಿಲುಕಿದ್ದರಿಂದ ಒಂಬತ್ತು ಜನ ಸಿಬ್ಬಂದಿ ಉಸಿರಾಡಲು ಪರದಾಡುತ್ತಿದ್ದರು. ತಕ್ಷಣವೇ ಲಿಫ್ಟ್ನಲ್ಲಿದ್ದ ಒಬ್ಬ ಸಿಬ್ಬಂದಿ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಲಿಫ್ಟ್ ದುರಸ್ತಿ ಮಾಡಲು ಸಾಧ್ಯವಾಗದ ಹಿನ್ನೆಲೆ ತಡೆ ಗೋಡೆಯನ್ನು ಒಡೆದು ಒಳಗಿದ್ದವರನ್ನು ರಕ್ಷಣೆ ಮಾಡಲಾಗಿದೆ.
ಕೆಟ್ಟು ಹೋಗಿರುವ ಲಿಫ್ಟ್ ಇರುವ ಕಟ್ಟಡವನ್ನು ಈ ಹಿಂದೆ ಜಯದೇವ ಆಸ್ಪತ್ರೆಯವರು ಬಳಸುತ್ತಿದ್ದರು. ಹೀಗಾಗಿ ಜಿಮ್ಸ್ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ಬರಬಾರದು ಎಂದು ಲಿಫ್ಟ್ ಅನ್ನು ಮೂರನೇ ಅಂತಸ್ತಿನಲ್ಲಿ ನಿಲ್ಲದಂತೆ ಮಾಡಲು ಗೋಡೆ ಕಟ್ಟಲಾಗಿತ್ತು. ದುರಂತ ಎಂದರೆ, ಅದೇ ಮೂರನೇ ಮಹಡಿಯ ವಾಲ್ ಡೋರ್ ಬಳಿಯೇ ಲಿಫ್ಟ್ ಕೆಟ್ಟು ನಿಂತಿದೆ.
ಲಿಫ್ಟ್ ಕೆಟ್ಟು ನಿಂತಾಗ 10 ರಿಂದ 15 ನಿಮಿಷಗಳಲ್ಲಿ ದುರಸ್ತಿ ಆಗಬಹುದು ಎಂದು ಸಿಬ್ಬಂದಿ ಹಾಗೆಯೇ ಅದರೊಳಗಡೆ ನಿಂತಿದ್ದರು. ಆದರೆ, ಲಿಫ್ಟ್ ಸರಿ ಹೋಗುವ ಸಾಧ್ಯತೆ ಕಾಣದ ಹಿನ್ನೆಲೆ ಒಳಗಿದ್ದವರು ಲಿಫ್ಟ್ ಬಾಗಿಲನ್ನು ಬಲವಂತದಿಂದ ಎಳೆದು ತೆಗೆದಿದ್ದಾರೆ. ಆದರೆ ಬಾಗಿಲು ತೆರೆಯುತ್ತಿದ್ದಂತೆಯೇ ಎದುರಿಗೆ ದೊಡ್ಡ ಗೋಡೆ ಕಾಣಿಸಿದೆ. ಬಳಿಕ ಎಲ್ಲಾ ಸಿಬ್ಬಂದಿ ಕಿರುಚಾಡಲು ಆರಂಭಿಸಿದ್ದಾರೆ. ಅದಾದ ಒಂದೂವರೆ ಗಂಟೆ ಬಳಿಕ ಡ್ರಿಲ್ ಮಷಿನ್ನಿಂದ ಗೋಡೆ ಒಡೆದು ಎಲ್ಲರನ್ನೂ ರಕ್ಷಿಸಲಾಗಿದೆ. ಲಿಫ್ಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಎಚ್ಚೆತ್ತುಕೊಂಡು ಎಲ್ಲರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದೆವೆ ಎಂದು ಜಿಮ್ಸ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್ ತಿಳಿಸಿದ್ದಾರೆ.