ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಶಾಕ್: ಲಂಡನ್ನಲ್ಲಿ Masters ನಂತರ ಉದ್ಯೋಗವಿಲ್ಲ!

ಲಂಡನ್ :ಲಂಡನ್ನಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆಯೊಬ್ಬರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಲಂಡನ್ನಲ್ಲಿ ಮಾಸ್ಟರ್ಸ್ ಪದವಿ ಮಾಡದಂತೆ ಸಲಹೆ ನೀಡಿದ್ದಾರೆ.
ಪದವಿ ಪಡೆದ ನಂತರ ಅಲ್ಲಿಯೇ ಉದ್ಯೋಗ ಪಡೆಯೋದು ಕಷ್ಟ ಎಂದಿದ್ದಾರೆ. ಈ ಮಹಿಳೆ ಭಾರತದಲ್ಲಿ ಸ್ನಾತಕ ಪದವಿ ಪಡೆದ ನಂತರ ಲಂಡನ್ಗೆ ಮಾಸ್ಟರ್ಸ್ ಮಾಡಲು ಬಂದಿದ್ದು, ಅದೃಷ್ಟವಶಾತ್ ಲಂಡನ್ನಲ್ಲಿ ಉದ್ಯೋಗ ಪಡೆದ ಕೆಲವರಲ್ಲಿ ಒಬ್ಬರಾಗಿದ್ದಾರೆ.
ಮೇ 11ರಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ, “ನನ್ನ ಬ್ಯಾಚ್ನ 90% ವಿದ್ಯಾರ್ಥಿಗಳು ಲಂಡನ್ನಲ್ಲಿ ಉದ್ಯೋಗ ಸಿಗದೆ ತವರಿಗೆ ಮರಳಿದ್ದಾರೆ” ಎಂದು ಬಹಿರಂಗಪಡಿಸಿದ್ದಾರೆ.
“ನಾನು ಲಂಡನ್ಗೆ ಮಾಸ್ಟರ್ಸ್ಗೆ ಬರಬೇಕೆಂದು ಕೆಲವರು ಮೆಸೇಜ್ ಕಳುಹಿಸುತ್ತಾರೆ, ಆದರೆ ನಾನು ಬರಬೇಡಿ ಎಂದು ಹೇಳುತ್ತೇನೆ. ನನ್ನ ಬ್ಯಾಚ್ನ 90% ಜನರಿಗೆ ಉದ್ಯೋಗ ಸಿಗಲಿಲ್ಲ, ಅವರೆಲ್ಲ ಭಾರತಕ್ಕೆ ಹಿಂತಿರುಗಬೇಕಾಯಿತು. ಒಂದು ವೇಳೆ ನೀವು ಹಣ ಖರ್ಚು ಮಾಡಲು ಸಿದ್ಧರಿದ್ದರೆ ಮಾತ್ರ ಇಲ್ಲಿಗೆ ಬರಲು ಯೋಚಿಸಿ” ಎಂದು ಅವರು ಹೇಳಿದ್ದಾರೆ.
ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಈ ಪರಿಸ್ಥಿತಿ ಹಿಂದೆ ಉತ್ತಮವಾಗಿತ್ತು. ಹಿಂದೆ 60 ರಿಂದ 70% ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿತ್ತು. ಇಷ್ಟು ಕೆಟ್ಟದಾಗಿರಲಿಲ್ಲ, ಶ್ರೀಮಂತರ ಮಕ್ಕಳಿಗೆ ಸಂತೋಷಕ್ಕಾಗಿ” ಎಂದೆಲ್ಲ ಹೇಳಲಾಗಿದೆ.
“ಇದು ಯಾವ ಕ್ಷೇತ್ರ ಎನ್ನೋದರ ಮೇಲೆ ಆಧಾರಿತವಾಗಿರುತ್ತದೆ, ಅಲ್ವೇ? ಆಗ ವೈದ್ಯಕೀಯ, ಹಣಕಾಸು ಕ್ಷೇತ್ರಗಳು ಉತ್ತುಂಗದಲ್ಲಿವೆ ಅಲ್ವಾ? ಎಂದು ಪ್ರಶ್ನೆ ಮಾಡಲಾಗಿದೆ. ಆಗ ಈ ಮಹಿಳೆ ಹಣಕಾಸು ಕ್ಷೇತ್ರದಲ್ಲಿಯೂ ಉದ್ಯೋಗಗಳು ಕಡಿಮೆಯಾಗಿವೆ. ವೈದ್ಯಕೀಯ ಕ್ಷೇತ್ರದ ಬಗ್ಗೆ ಗೊತ್ತಿಲ್ಲ, ಆದರೆ ಹಣಕಾಸು ಕ್ಷೇತ್ರದಲ್ಲಿಯೂ ಉದ್ಯೋಗ ಸಿಗುತ್ತಿಲ್ಲ” ಎಂದು ಬರೆದಿದ್ದಾರೆ. ಅನೇಕರು ಈ ಮಹಿಳೆಯ ಪ್ರಾಮಾಣಿಕ ಮತ್ತು ಸ್ಪಷ್ಟ ಅಭಿಪ್ರಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.