ಚಾಟ್ಜಿಪಿಟಿ ಈಗ ನಿಮ್ಮ ಐಫೋನ್ನಲ್ಲೇ: ಆಯಪಲ್ ಇಂಟೆಲಿಜೆನ್ಸ್ ಜೊತೆ ಅನುಭವಿಸಿ ಹೊಸ ಯುಗ!

ಐಒಎಸ್ 18.4 ಅಪ್ಡೇಟ್ನಲ್ಲಿ ಬಹುನಿರೀಕ್ಷಿತ ಆಯಪಲ್ ಇಂಟೆಲಿಜೆನ್ಸ್ ಎಂಬ ಜನರೇಟಿವ್ ತಂತ್ರಜ್ಞಾನವಿದೆ. ಇದರಿಂದ ಸಿರಿ ಎಂಬ ಸಹಾಯಕ ತಂತ್ರಜ್ಞಾನವನ್ನು ಬಳಸಿ, ಫೋನ್ಗೆ ಸೂಚನೆ ನೀಡಿದ ತಕ್ಷಣವೇ ನಮಗೆ ಬೇಕಾದ ಮಾಹಿತಿ, ಪಠ್ಯ, ಅದರ ತಿದ್ದುಪಡಿ, ಚಿತ್ರ ರಚನೆ ಮುಂತಾದವೆಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. ‘ನೋಟ್’ ಆಯಪ್ ಮೂಲಕವಾಗಿ ಆಯಪಲ್ ಇಂಟೆಲಿಜೆನ್ಸ್ಗೆ ಜನಪ್ರಿಯ ಚಾಟ್ಜಿಪಿಟಿಯ ನೇರ ಬೆಂಬಲವಿದೆ. ಹೀಗಾಗಿ, ಚಾಟ್ಜಿಪಿಟಿಗೆ ಪ್ರತ್ಯೇಕ ಆಯಪ್ ಅಥವಾ ಚಂದಾದಾರಿಕೆಯಿಲ್ಲದೆಯೇ ಇದನ್ನು ಬಳಸಿ, ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವೇಗವಾಗಿಸಬಹುದು. ನಿರ್ದಿಷ್ಟ ವಸ್ತು, ವಿಷಯ ಹೇಳಿ, ಇದರ ಬಗೆಗೆ ಕಥೆ ಬರೆದುಕೊಡು ಎಂದರೂ ಐಫೋನ್ನಲ್ಲೇ ಇದು ಸಿದ್ಧವಾಗುತ್ತದೆ.

ಯಾವೆಲ್ಲಾ ಸಾಧನಗಳಿಗೆ ಲಭ್ಯ?
ಐಒಎಸ್ 18, ಐಪ್ಯಾಡ್ಒಎಸ್ 18 ಹಾಗೂ ಮ್ಯಾಕ್ಒಎಸ್ ಸಿಕೋಯಾ (Sequoia) ಕಾರ್ಯಾಚರಣಾ ವ್ಯವಸ್ಥೆಯಿರುವ ಆಯಪಲ್ ಸಾಧನಗಳಲ್ಲಿ ಈ ವಿನೂತನ ಭಾಷಾ ವೈಶಿಷ್ಟ್ಯ ಹಾಗೂ ಸದ್ಯಕ್ಕೆ ಇಂಗ್ಲಿಷ್ನಲ್ಲಿ ಆಯಪಲ್ ಇಂಟೆಲಿಜೆನ್ಸ್ ಕಾಣಸಿಗುತ್ತಿದೆ. ಐಫೋನ್ 16 ಸರಣಿಯ ಎಲ್ಲ ಫೋನ್ಗಳು, ಐಫೋನ್ 15 ಪ್ರೊ ಹಾಗೂ 15 ಪ್ರೊ ಮ್ಯಾಕ್ಸ್, ಐಪ್ಯಾಡ್ ಮಿನಿ ಹಾಗೂ ಎಂ1 ಮತ್ತು ನಂತರದ ಚಿಪ್ಸೆಟ್ ಇರುವ ಎಲ್ಲ ಐಪ್ಯಾಡ್ ಹಾಗೂ ಮ್ಯಾಕ್ ಸಾಧನಗಳಲ್ಲಿ ಕಾರ್ಯಾಚರಣಾ ವ್ಯವಸ್ಥೆ ಅಪ್ಡೇಟ್ ಮಾಡಿಕೊಂಡರೆ, ಈ ಹೊಸ ವೈಶಿಷ್ಟ್ಯಗಳು ದೊರೆಯುತ್ತವೆ.
ಕನ್ನಡದಲ್ಲಿ ಬಳಕೆದಾರ ಐಫೋನ್ ಇಂಟರ್ಫೇಸ್
ಪ್ರಮುಖ ವೈಶಿಷ್ಟ್ಯಗಳು
ಸಿರಿ ಎಂಬ ಧ್ವನಿ ಸಹಾಯಕ ತಂತ್ರಜ್ಞಾನ ಬಳಸಿ, ಆದೇಶಗಳನ್ನು ನೀಡಿ ನಮಗೆ ಬೇಕಾದ ಕೆಲಸಗಳನ್ನು ಅಂತರ್ಜಾಲ ಸಂಪರ್ಕದ ಮೂಲಕವಾಗಿ ಮಾಡಿಕೊಳ್ಳಬಹುದು. ಇದರೊಂದಿಗೆ, ಪ್ಲೇಗ್ರೌಂಡ್ ಎಂಬ ಆಯಪ್ ಮೂಲಕ, ಹಲವು ಥೀಮ್ಗಳ ಬೆಂಬಲದೊಂದಿಗೆ ಆಕರ್ಷಕವಾಗಿ ಚಿತ್ರಗಳನ್ನು ರಚಿಸಬಹುದು ಹಾಗೂ ನಮ್ಮದೇ ಚಿತ್ರಗಳನ್ನು ತಿದ್ದಬಹುದು. ಇದಲ್ಲದೆ, ನೋಟ್ ಆಯಪ್ನಲ್ಲಿ ಚಾಟ್ಜಿಪಿಟಿಗೆ ನೀಡುವ ಕಮಾಂಡ್ಗಳನ್ನು ನೀಡಿ, ಒಂದು ಕಥೆ ಬರೆಯಬಹುದು ಹಾಗೂ ಅದಕ್ಕೆ ಸೂಕ್ತವಾದ ಚಿತ್ರಗಳನ್ನು ರಚಿಸಿಕೊಡುವಂತೆ ನಾವು ಈ ಕೃತಕ ಬುದ್ಧಿಮತ್ತೆ (ಆಯಪಲ್ ಇಂಟೆಲಿಜೆನ್ಸ್) ವ್ಯವಸ್ಥೆಗೆ ಸೂಚಿಸಿದರೆ, ಕ್ಷಣ ಮಾತ್ರದಲ್ಲಿ ಕಥೆಯೂ ಸಿದ್ಧ, ಅದಕ್ಕೆ ಸೂಕ್ತವಾದ ಚಿತ್ರಗಳೂ ಸಿದ್ಧ. ಸೂಕ್ತ ಪ್ರಾಂಪ್ಟ್ ಅಥವಾ ಆದೇಶಗಳನ್ನು ನೀಡಿ ಪಠ್ಯ ಅಥವಾ ಚಿತ್ರವನ್ನು ತಿದ್ದುಪಡಿ ಕೂಡ ಮಾಡಬಹುದು.