ಅಪಘಾತದ ಬಳಿಕ ತಕ್ಷಣ ಚಿಕಿತ್ಸೆ: ತಲಾ ₹1.5 ಲಕ್ಷವರೆಗೆ ಉಚಿತ ಚಿಕಿತ್ಸೆಗೆ ಅವಕಾಶ

ನವದೆಹಲಿ: ರಸ್ತೆ ಅಪಘಾತ ಸಂತ್ರಸ್ತರು ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಮೊದಲ 7 ದಿನಗಳ ಕಾಲ ತಲಾ ಒಂದೂವರೆ ಲಕ್ಷ ರೂ.ವರೆಗಿನ ಚಿಕಿತ್ಸೆಯನ್ನು ಹಣ ಭರಿಸದೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಈ ಸೌಲಭ್ಯ ಸೋಮವಾರ (ಮೇ 5) ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ರಸ್ತೆ ಅಪಘಾತಗಳಾದಾಗ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೆ ಮರಣ ಹೊಂದುವವರ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೋಸ್ಕರ ಈ ಯೋಜನೆ ರೂಪಿಸಲಾಗಿದೆ. ಪೊಲೀಸರು, ಆಸ್ಪತ್ರೆಗಳು ಮತ್ತು ರಾಜ್ಯ ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ದೇಶಾದ್ಯಂತ ಜಾರಿ ಮಾಡಲಿದೆ. ಗೊತ್ತುಪಡಿಸಿದ ಆಸ್ಪತ್ರೆಗಳನ್ನು ಹೊರತುಪಡಿಸಿ ಬೇರಾವುದಾದರೂ ಆಸ್ಪತ್ರೆಗೆ ದಾಖಲಿಸಿದರೆ ಅದು ಮಾರ್ಗಸೂಚಿಯಲ್ಲಿ ಸೂಚಿಸಿರುವಂತೆ ಸ್ಥಿರೀಕರಣ ಉದ್ದೇಶಕ್ಕೆ ಮಾತ್ರ ಆಗಿರಬೇಕು. ಚಿಕಿತ್ಸೆ ಬಳಿಕ ಸರ್ಕಾರವೇ ಸಂಬಂಧಿಸಿದ ಆಸ್ಪತ್ರೆಗೆ ಹಣ ಪಾವತಿ ಮಾಡುತ್ತದೆ.
ಇದರ ಅನುಷ್ಠಾನಕ್ಕಾಗಿ ರಸ್ತೆ ಸಾರಿಗೆ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸರ್ಕಾರ 11 ಸದಸ್ಯರ ಚಾಲನಾ ಸಮಿತಿ ರಚಿಸಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯೂ ಇದರಲ್ಲಿ ಸದಸ್ಯರಾಗಿರುತ್ತಾರೆ. ಇದರ ಪ್ರಾಯೋಗಿಕ ಯೋಜನೆಯನ್ನು ಚಂಡೀಗಢದಲ್ಲಿ ಕಳೆದ ವರ್ಷ ಮಾರ್ಚ್ 24ರಂದು ಪ್ರಾರಂಭಿಸಿ, ನಂತರ 6 ರಾಜ್ಯಗಳಿಗೆ ವಿಸ್ತರಿಸಲಾಗಿತ್ತು.
