ಐಎಸ್ಐಗೆ 5 ಸಾವಿರಕ್ಕೆ ಸೇನಾ ಮಾಹಿತಿಯ ಹಸ್ತಾಂತರ- ಇಬ್ಬರ ಬಂಧನ

ಚಂಡೀಗಢ: ಕೇವಲ 5 ಸಾವಿರ ರೂ. ಮತ್ತು 10 ಸಾವಿ ರೂ.ಗಳಿಗೆ ಪಾಕಿಸ್ತಾನದ ಐಎಸ್ಐಗೆ (ISI) ಮಿಲಿಟರಿ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಪಂಜಾಬ್ನ ಅಮೃತಸರದಲ್ಲಿರುವ ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್ಐಗೆ ಸೋರಿಕೆ ಮಾಡುತ್ತಿದ್ದರು.
ಈ ಕುರಿತು ಮಾಹಿತಿ ನೀಡಿರುವ ಅಮೃತಸರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣೀಂದರ್ ಸಿಂಗ್, ಭಾರತದ ವಾಯುನೆಲೆ ಮತ್ತು ಸೂಕ್ಷ್ಮ ಪ್ರದೇಶಗಳ ಬಗ್ಗೆ ಪಾಕ್ನ ಐಎಸ್ಐಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಇಬ್ಬರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಹರ್ಪ್ರೀತ್ ಎಂಬ ಸಹವರ್ತಿ ಇವರಿಬ್ಬರನ್ನು ಪಾಕ್ನ ಐಎಸ್ಐ ಜೊತೆಗೆ ಲಿಂಕ್ ಮಾಡಿಸಿದ್ದಾನೆ. ಆತನ ವಿರುದ್ಧ ಈಗಾಗಲೇ ಎನ್ಡಿಪಿಎಸ್ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೇ ಆರೋಪಿಗಳಿಗೆ ಸಣ್ಣ ಮಾಹಿತಿಗಾಗಿ 5,000 ರೂ. ಮತ್ತು ಮಿಲಿಟರಿ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ್ರೆ 10,000 ರೂ.ಗಳನ್ನ ನೀಡಲಾಗುತ್ತಿತ್ತು. ಹಾಗಾಗಿ ಅಧಿಕೃತ ರಹಸ್ಯ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸದ್ಯ ಬಂಧಿತರಿಂದ ಡೇಟಾ ಜೊತೆಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಆರ್ಡಿಎಕ್ಸ್, ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
