ಸಂಪಂಗಿರಾಮದಲ್ಲಿ 80 ವರ್ಷ ಹಳೆಯ ಕಟ್ಟಡ ಕುಸಿತ- ಮಾಲೀಕನ ರಕ್ಷಿಸಿದ ಮೇಸ್ತ್ರಿ

ಬೆಂಗಳೂರು: ಸಂಪಂಗಿರಾಮ ನಗರದಲ್ಲಿ ಇಂದು 80 ವರ್ಷ ಹಳೆಯ ಕಟ್ಟಡ ಕುಸಿದು ಬಿದ್ದಿದ್ದು ಅವಶೇಷಗಳ ಅಡಿಯಲ್ಲಿ ಕಟ್ಟಡದ ಮಾಲೀಕ ಅಶ್ವಿನ್ ಎಂಬುವರು ಸಿಲುಕಿಕೊಂಡಿದ್ದು ಅವರನ್ನು ಮೇಸ್ತ್ರಿಯೊಬ್ಬರು ರಕ್ಷಿಸಿದ್ದಾರೆ.

ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಅಧಿಕಾರಿಗಳ ಪ್ರಕಾರ, ಕಟ್ಟಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದ್ದು ಇದಕ್ಕಾಗಿ ಕಟ್ಟಡದಲ್ಲಿ ಬಾಡಿಗೆಗಿದ್ದವರನ್ನು ಖಾಲಿ ಮಾಡಿಸಲಾಗಿತ್ತು.
ಹೀಗಾಗಿ ದೊಡ್ಡ ದುರಂತವೊಂದು ಸಂಭವಿಸಿದೆ. ನೀರಿನ ಸಂಪರ್ಕಕ್ಕಾಗಿ ಸಂಪ್ ಅನ್ನು ಅಗೆಯಲಾಗುತ್ತಿದ್ದಾಗ ಕಟ್ಟಡ ಕುಸಿದಿದೆ. ಈ ವೇಳೆ ನಾಲ್ವರು ಕೆಲಸ ಮಾಡುತ್ತಿದ್ದರು. ಕಟ್ಟಡ ಕುಸಿದಾಗ ಮಾಲೀಕ ಅಶ್ವಿನ್ ಅವರು ಸಿಲುಕಿಕೊಂಡಿದ್ದರು. ಕಟ್ಟಡದ ಅವಶೇಷಗಳಲ್ಲಿನ ಸಣ್ಣ ಮಾರ್ಗದಿಂದ ಅಶ್ವಿನ್ ಅವರನ್ನು ಹೊರಗೆ ಕರೆತರಲಾಯಿತು ಎಂದು ಮೇಸ್ತ್ರಿ ಮಾಣಿಕ್ಯಂ ತಿಳಿಸಿದ್ದಾರೆ. ಅಶ್ವಿನ್ ಅವರ ಬಲಗಾಲಿಗೆ ಸಣ್ಣ ಗಾಯಗಳಾಗಿದ್ದು, ಅವರನ್ನು ವಿಟ್ಠಲ್ ಮಲ್ಯ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಕಟ್ಟಡ ಕುಸಿಯುವುದಕ್ಕಿಂತ ಕೆಲ ನಿಮಿಷಗಳ ಮೊದಲು, ಮೂವರು ಕಾರ್ಮಿಕರು ಊಟಕ್ಕೆಂದು ಕಟ್ಟಡದಿಂದ ಹೊರಬಂದಿದ್ದರು. ಸ್ವಲ್ಪ ದೂರ ನಡೆಯುತ್ತಿದ್ದಂತೆ ಗೋಡೆ ಕುಸಿದು ಬೀಳುವ ದೊಡ್ಡ ಶಬ್ದ ಕೇಳಿಸಿತು. ಅದು ನಾವು ಕೆಲಸ ಮಾಡುತ್ತಿದ್ದ ಕಟ್ಟಡ ಎಂದು ಅವರಿಗೆ ಅರಿವಾಯಿತು. ಕಟ್ಟಡ ಕುಸಿಯುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ನಾವು ಕಟ್ಟಡದಿಂದ ಹೊರಬಂದ ನಾಲ್ಕು ನಿಮಿಷಗಳಲ್ಲೇ ಕಟ್ಟಡ ಕುಸಿದಿದೆ. ಒಂದು ವೇಳೆ ಅಲ್ಲೆ ಇದ್ದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂದು ಕೂಲಿ ಕಾರ್ಮಿಕ ಮಲ್ಲೇಶ್ ಹೇಳಿದರು.
ಅಧಿಕಾರಿಗಳು ಕಟ್ಟಡ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಬ್ಯಾರಿಕೇಡ್ ಹಾಕಿದ್ದು ಅವಶೇಷಗಳನ್ನು ತೆರವುಗೊಳಿಸಿ ಕುಸಿದ ಕಟ್ಟಡದ ಪಕ್ಕದಲ್ಲಿರುವ ಮನೆಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ಅಕ್ಷಯ್ ಹಕೆ ಸ್ಥಳಕ್ಕೆ ಆಗಮಿಸಿ, ರಕ್ಷಣಾ ತಂಡವು ನೆರೆಯ ಕಟ್ಟಡದ ಜನರಿಗೆ ಅವಶೇಷಗಳನ್ನು ತೆರವುಗೊಳಿಸುವವರೆಗೆ ದೂರವಿರಲು ಸೂಚಿಸಿದೆ ಎಂದು ಹೇಳಿದರು.
