ಮಗು ಕೊಟ್ಟು ಮೋಸ: ಪ್ರೇಮ ಕಥೆ ಕೊನೆಗೆ ಬೆಂಕಿಗೆಯಾಗಿ ಬದಲು

ದೇವನಹಳ್ಳಿ: ಮುಸ್ಸಂಜೆಯಲ್ಲಿ ಸೂರ್ಯಾಸ್ತವಾಗುತ್ತಿರುವಂತೆಯೇ ಇತ್ತ ಮನೆಯಲ್ಲಿನ ಕೋಣೆಯಿಂದ ಬೆಂಕಿಯ ರುದ್ರ ನರ್ತನವಾಗುತ್ತಿತ್ತು. ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಲೀಕ್ ಏನಾದರೂ ಆಯಿತೇ ಎಂದು ಸ್ಥಳೀಯರೆಲ್ಲ ಜಮಾಯಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುವಷ್ಟರಲ್ಲೇ ಮನೆಯ ಅರ್ಧಭಾಗ ಸಂರ್ಪೂರ್ಣ ಸುಟ್ಟು ಕರಕಲಾಗಿತ್ತು. ಸುಂದರವಾಗಿದ್ದ ಐಷಾರಾಮಿ ಮನೆ ಹೀಗ್ಯಾಕಾಯಿತು ಎಂದು ಕೇಳಲು ಹೋದವರಿಗೆ ಸಿಕ್ಕಿದ್ದು, ಪ್ರೀತಿಸಿ ಮದುವೆಯಾಗುವುದಾಗಿ ವಂಚಿಸಿ ಮಗು ಕೊಟ್ಟು ಕೈ ಕೊಟ್ಟ ಹಳೆ ಪ್ರೇಮ ಕಥೆ! ಮಹಿಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ನಿವಾಸಿ ಹಾಗೂ ಜಿಮ್ ಟ್ರೈನರ್ ಗೌತಮ್ ಎಂಬುವವನ ಜೊತೆ ಎಂಟು ವರ್ಷದಿಂದ ಪ್ರೀತಿ ಪ್ರೇಮದ ಬಲೆಗೆ ಬಿದ್ದಿದ್ದು ಗರ್ಭಿಣಿಯಾಗಿದ್ದಳು. ಆದರೆ, ಅಂದು ಈಕೆಯನ್ನು ಗರ್ಭಿಣಿ ಮಾಡಿದ್ದ ಗೌತಮ್, ಮತ್ತೊಬ್ಬಳ ಜೊತೆ ಸುತ್ತಾಡುತ್ತಿದ್ದ. ಅದನ್ನು ಕಂಡ ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಲ್ಲದೆ, ನನ್ನ ಮಗುವಿಗೆ ತಂದೆ ಗೌತಮ್ ಎಂದು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದರು.

ಕೇಸ್ ಸಂಬಂಧ ವಿಚಾರಣೆ ನಡೆಯುತ್ತಿರುವಾಗಲೇ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದ ಗೌತಮ್ ಮತ್ತು ಸಂತ್ರಸ್ತೆ, ಇದೆಲ್ಲ ಬೇಡ ರಾಜಿ ಆಗೋಣ ಎಂದು ಒಪ್ಪಿಕೊಂಡಿದ್ದರು. ಅದರಂತೆ, ಗೌತಮ್ ಆಕೆಯನ್ನು 20 ದಿನಗಳ ಹಿಂದೆ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ, ಮನೆಗೆ ಕರೆದುಕೊಂಡು ಹೋದ ನಂತರ ನಿತ್ಯ ಪ್ರೀತಿಸಿದ್ದ ಸಂತ್ರಸ್ತೆ ಮತ್ತು ಆಕೆಯ ಮಗುವಿಗೆ ಗೌತಮ್ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆ.
ಮನೆಗೆ ಬಂದಳು ಮತ್ತೊಬ್ಬ ಬಾಣಂತಿ!
ಇತ್ತೀಚೆಗೆ ಮತ್ತೊಬ್ಬ ಬಾಣಂತಿಯನ್ನು ಪತ್ನಿ ಎಂದು ಗೌತಮ್ ಮನೆಗೆ ಕರೆತಂದಿದ್ದ ಎನ್ನಲಾಗಿದೆ. ಅದನ್ನು ಪ್ರಶ್ನಿಸಿದ ಸಂತ್ರಸ್ತೆ ವಿರುದ್ಧ ಗೌತಮ್ ಮತ್ತು ಆತನ ಕುಟುಂಬಸ್ಥರು ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ.
ಕೋಣೆಗೆ ಬೆಂಕಿ ಹಾಕಿ ಸಂತ್ರಸ್ತೆಯ ತಳ್ಳಿದ್ದ ಆರೋಪ
ಕಿರುಕುಳ ನೀಡಿದ್ದಷ್ಟೇ ಅಲ್ಲದೆ, ಮನೆಯ ಕೋಣೆಗೆ ಬೆಂಕಿ ಹಾಕಿ ಆ ಬೆಂಕಿಗೆ ಸಂತ್ರಸ್ತೆಯನ್ನು ತಳ್ಳಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆ ಯತ್ನ ಮಾಡುವಾಗ ತಪ್ಪಿಸಿಕೊಂಡು ಹೊರಗಡೆ ಬಂದಿದ್ದು, ಈ ವೇಳೆ ನೆರವಿಗೆ ಬಂದ ಕುಟುಂಬಸ್ಥರ ಮೇಲೂ ಗೌತಮ್ ಮತ್ತು ಆತನ ತಾಯಿ ಸಹೋದರಿ ಹಲ್ಲೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಕಣ್ಣೀರು ಹಾಕಿದ್ದಾರೆ.
ಆರೋಪಿ ಗೌತಮ್ ಮನೆಯವರು ಹೇಳೋದೇ ಬೇರೆ!
ಅತ್ತ ಗೌತಮ್ ಕುಟುಂಬಸ್ಥರು, ಸಂತ್ರಸ್ತೆಯೇ ನಮ್ಮ ಮನೆಗೆ ಬೆಂಕಿ ಹಾಕಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ದೂರಿದ್ದಾರೆ. ಅಲ್ಲದೆ, ಏಳು ವರ್ಷಗಳಿಂದ ಕೇಸ್ ಕೋರ್ಟ್ನಲ್ಲಿ ನಡೆಯುತ್ತಿರುವಾಗ ನಮ್ಮ ಮನೆಗೆ 10 ರಿಂದ 12 ಜನ ಮಹಿಳೆಯರ ಜೊತೆ ಅತಿಕ್ರಮ ಪ್ರವೇಶ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದೇ ವಿಚಾರವಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ಸಹ ದಾಖಲಿಸಿದ್ದ ಕಾರಣ ಪೊಲೀಸರೇ ಬಂದು ಆಕೆಯನ್ನು ಮನೆಯಿಂದ ಹೊರಗಡೆ ಕಳುಹಿಸಿದ್ದರು. ಪೊಲೀಸರು ಮನೆಯಿಂದ ಹೊರಗಡೆ ಕಳುಹಿಸಿದಾಗ ಹೋದ ನಂತರ ಮತ್ತೆ ಬಂದು ಮನೆಯವರು ಹೊರಗಡೆ ಇರುವಾಗ ಈ ರೀತಿ ಮನೆಗೆ ಬೆಂಕಿ ಹಚ್ಚಿದ್ದಾಳೆ ಎಂದು ಗೌತಮ್ ಕುಟುಂಬಸ್ಥರು ಆರೋಪಿಸಿದ್ದಾರೆ
ಮನೆಗೆ ಬೆಂಕಿ ಬಿದ್ದ ಕಾರಣ ಮನೆಯ ಅರ್ಧಭಾಗದಷ್ಟು ಭಾಗಶಃ ಸುಟ್ಟು ಕರಕಲಾಗಿದ್ದು 25 ರಿಂದ 30 ಲಕ್ಷ ರೂಪಾಯಿಷ್ಟು ನಷ್ಟವಾಗಿದೆ ಎಂದು ಗೌತಮ್ ಕುಟುಂಬಸ್ಥರು ತಿಳಿಸಿದ್ದಾರೆ.
ಕೇಸ್ ಕೋರ್ಟ್ನಲ್ಲಿರುವಾಗಲೇ ಮನೆಯಲ್ಲಿ ಬೆಂಕಿಯ ಹೈಡ್ರಾಮಾ ನಡೆದಿರುವುದು ಪೊಲೀಸರಿಗೆ ತಲೆ ನೋವು ತರಿಸಿದೆ. ಬೆಂಕಿ ಹಚ್ಚಿದ್ದು ಯಾರು? ಯಾಕೆ ಎಂಬ ಸತ್ಯ ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
