ಪಾಮ್ ಎಣ್ಣೆ ಪೂರೈಕೆ ನೆಪದಲ್ಲಿ ₹ 62.76 ಲಕ್ಷ ವಂಚನೆ

ಕಲಬುರಗಿ: ಪಾಮ್ ಎಣ್ಣೆಯನ್ನು ಪೂರೈಸುವುದಾಗಿ ಹಂತ ಹಂತವಾಗಿ ₹ 62.76 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ನಗರದ ಪಾಟೀಲ ಟ್ರೇಡಿಂಗ್ ಕಂಪನಿಯ ಮಾಲೀಕ ಶಿವಾನಂದ ಪಾಟೀಲ ಅವರು ಅನ್ನಪೂರ್ಣ ಡಿಸ್ಟ್ರಿಬ್ಯೂಟರ್ಸ್‌ನ ಜಯಪ್ರಕಾಶ್ ರಾಮಸ್ವಾಮಿ ಎಂಬುವವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಮೊದಲೆಲ್ಲ ಹಣ ಹಾಕಿದ ಕೂಡಲೇ ಪಾಮ್ ಎಣ್ಣೆಯ ದಾಸ್ತಾನನ್ನು ಪೂರೈಸುತ್ತಿದ್ದರು. 2022ರ ಫೆಬ್ರುವರಿ 4ರಿಂದ 2022ರ ನವೆಂಬರ್ 15ರವರೆಗೆ ಅನ್ನಪೂರ್ಣ ಏಜೆನ್ಸಿ ಹೆಸರಿಗೆ ₹ 27,58,950 ಹಾಗೂ ರಾಮಸ್ವಾಮಿ ಏಜೆನ್ಸಿ ಹೆಸರಿಗೆ ₹ 6,67,460ನ್ನು ವರ್ಗಾವಣೆ ಮಾಡಲಾಗಿತ್ತು. ನಗದು ರೂಪದಲ್ಲಿ ₹ 28,50,000 ಸೇರಿದಂತೆ ಒಟ್ಟು 62,76,410.00 ಗಳನ್ನು ನೀಡಿದರೂ ಪಾಮ್ ಎಣ್ಣೆ ನೀಡದೇ ವಂಚಿಸಿದ್ದಾರೆ ಎಂದು ಎಂ.ಬಿ.ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.