₹60 ಕೋಟಿ ವಂಚನೆ ಕೇಸ್: ರಾಜ್ ಕುಂದ್ರಾ ಕಂಪನಿಯ 4 ಉನ್ನತ ಉದ್ಯೋಗಿಗಳಿಗೆ ಇಒಡಬ್ಲ್ಯೂ ಸಮನ್ಸ್; ಮತ್ತಷ್ಟು ಮಾಹಿತಿ ಬಯಲಾಗುವ ಸಾಧ್ಯತೆ

ಮುಂಬೈ: ನಟಿ ಶಿಲ್ಪಾ ಶೆಟ್ಟಿ (Shilpa Shetty), ರಾಜ್ ಕುಂದ್ರಾ (Raj Kundra) ದಂಪತಿ ಎದುರಿಸುತ್ತಿರುವ 60 ಕೋಟಿ ರೂ. ವಂಚನೆ (Fraud Case ) ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ್ರಾ ಒಡೆತನದ ಬೆಸ್ಟ್ ಡೀಲ್ ಪ್ರೈವೇಟ್ ಲಿಮಿಟೆಡ್‌ನ ನಾಲ್ವರು ಉದ್ಯೋಗಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಸಮನ್ಸ್ ಜಾರಿ ಮಾಡಿದೆ.

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿ ಉದ್ಯಮಿ ದೀಪಕ್ ಕೊಠಾರಿಯವರಿಗೆ 60 ಕೋಟಿ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಈ ವಂಚನೆ ನಡೆದಿದೆ. ಈ ಪ್ರಕರಣ ನಡೆಯುವಾಗ ಈ ನಾಲ್ವರು ನೌಕರರು ರಾಜ್ ಕುಂದ್ರಾ ಅವರ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು.
ನಾಲ್ವರು ಉದ್ಯೋಗಿಗಳಲ್ಲಿ ಒಬ್ಬರು ಕಳೆದ ವಾರ ಇಒಡಬ್ಲ್ಯೂನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಅಗತ್ಯವಿದ್ದರೆ ಮತ್ತೊಮ್ಮೆ ಅವರನ್ನು ವಿಚಾರಣೆಗೆ ಕರೆಯಬಹುದು. ಮುಂದಿನ ದಿನಗಳಲ್ಲಿ ಇತರ ಮೂವರು ಉದ್ಯೋಗಿಗಳ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಂದ್ರಾ ಹೇಳಿಕೊಂಡಂತೆ ಕಚೇರಿ ಪೀಠೋಪಕರಣಗಳಿಗೆ 20 ಕೋಟಿ ರೂ. ಖರ್ಚು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ವಿಚಾರಣೆಯ ಉದ್ದೇಶವಾಗಿದೆ. ಇದಲ್ಲದೆ, ಉದ್ಯೋಗಿಗಳಿಗೆ ಸಂಬಳವನ್ನು ಯಾವ ಮೂಲದಿಂದ ಪಾವತಿಸಲಾಗಿದೆ ಎಂಬುದನ್ನು ಪತ್ತೆ ಮಾಡುವುದಾಗಿದೆ. ಕುಂದ್ರಾ ಅವರ ಕಂಪನಿಗೆ ಉತ್ಪನ್ನಗಳನ್ನು ಜಾಹೀರಾತು ಮಾಡಿದ ಕಂಪನಿಗಳೊಂದಿಗೆ ಸಂಬಂಧಿಸಿದ ಉತ್ಪನ್ನ ಪೂರೈಕೆದಾರರು ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುವುದು. ಪ್ರಶ್ನಾವಳಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅಗತ್ಯವಿದ್ದರೆ ಹೆಚ್ಚಿನ ವಿಚಾರಣೆಗಾಗಿ ಕುಂದ್ರಾ ಅವರನ್ನು ಮತ್ತೆ ಕರೆಸಲಾಗುತ್ತದೆ.
ಅಕ್ಟೋಬರ್ ಆರಂಭದಲ್ಲಿ ನಡೆದ ವಿಚಾರಣೆ ವೇಳೆ, ಉದ್ಯಮಿ ಕುಂದ್ರಾ ಅವರು ತಮ್ಮ ಕಂಪನಿಯು ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ವ್ಯಾಪಾರ ಮಾಡಿದೆ. 2016 ರಲ್ಲಿ ಕೇಂದ್ರವು ಜಾರಿಗೆ ತಂದ ನೋಟು ರದ್ದತಿಯ ನಂತರ ಭಾರೀ ನಷ್ಟ ಎದುರಿಸಿದ್ದೇವೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಂಪನಿಯು ಸಾಲ ಪಡೆದ ಹಣವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದಿದ್ದರು