ಅಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪ – 622 ಮಂದಿ ಸಾವು

ಕಾಬುಲ್: ಅಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ (ಆ.31) ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 622 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳ, 34.50N ಅಕ್ಷಾಂಶ ಮತ್ತು 70.81E ರೇಖಾಂಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪದಿಂದ ಕುನಾರ್ ಪ್ರಾಂತ್ಯದ ಮೂರು ಹಳ್ಳಿಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ಇನ್ನೂ ಹಲವಾರು ಹಳ್ಳಿಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಒಂದೇ ಗ್ರಾಮದಲ್ಲಿ 30 ಮಂದಿ ಸಾವಿಗೀಡಾಗಿದ್ದಾರೆ. ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಫ್ಘಾನ್ ಆರೋಗ್ಯ ಸಚಿವಾಲಯ ವಕ್ತಾರ ಶರಫತ್ ಜಮಾನ್ ತಿಳಿಸಿದ್ದಾರೆ.
ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಬೇರೆ ದೇಶಗಳು ರಕ್ಷಣಾ ಅಥವಾ ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡಲು ಮುಂದೆ ಬಂದಿಲ್ಲ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ದೆಹಲಿ ಎನ್‌ಸಿಆರ್ ಮತ್ತು ಇತರ ನಗರಗಳ ನಿವಾಸಿಗಳು ಕಂಪನದ ಅನುಭವದಿಂದ ಭಯದಿಂದ ಕಟ್ಟಡಗಳಿಂದ ಹೊರಗೆ ಓಡಿದ್ದಾರೆ ಎಂದು ವರದಿಯಾಗಿದೆ.
