59ರ ಮಹಿಳೆಗೆ ಪ್ರೇಮಾಂಕುರ, 25ರ ಯುವಕನಿಂದ ₹2.3 ಕೋಟಿ ವಂಚನೆ!

ಬೆಂಗಳೂರು: ಆನ್ಲೈನ್ ವಂಚನೆ ಇತ್ತೀಚಿಗೆ ಹೆಚ್ಚುತ್ತಲೇ ಇದೆ. ಆನ್ಲೈನ್ ಗೇಮಿಂಗ್ ಮೂಲಕ, ಸೈಬರ್ ವಂಚನೆಯ (Cyber Fraud) ಮೂಲಕ ಹಲವರು ಹಣ ಕಳೆದುಕೊಂಡರೆ, ಇನ್ನು ಕೆಲವರು ಮ್ಯಾಟ್ರಿಮೊನಿ ಆಪ್ಗಳ ಮೂಲಕವೂ ವಂಚನೆಗೊಳಗಾಗುತ್ತಾರೆ. ಬೆಂಗಳೂರು ಮೂಲದ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಮ್ಯಾಟ್ರಿಮೊನಿಯಲ್ಲಿ ಸಿಕ್ಕ ವ್ಯಕ್ತಿಯ ಮಾತು ಕೇಳಿ ರೂ.2.3 ಕೋಟಿ ಹಣ ಕಳೆದುಕೊಂಡಿದ್ದಾರೆ. 4 ವರ್ಷಗಳ ಅಂತರದಲ್ಲಿ ಕೋಟಿಗಟ್ಟಲೆ ಹಣ ಕಳೆದುಕೊಂಡಿರುವ ಮಹಿಳೆ, ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ನಿವೃತ್ತ ಶಿಕ್ಷಕಿ ಮೋಸ ಹೋಗಿದ್ದೇಗೆ?
ಬೆಂಗಳೂರು ಮೂಲದ 59 ವರ್ಷದ ಮಹಿಳೆಯೊಬ್ಬರು ಹಲವು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು. ಹೊಸ ಜೀವನ, ಹೊಸ ಸಂಗಾತಿಯ ನಿರೀಕ್ಷೆಯಿಂದ 2019 ರಲ್ಲಿ ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ರಜಿಸ್ಟರ್ ಮಾಡಿಕೊಂಡಿದ್ದರು. ಅಲ್ಲಿ ಸಿಕ್ಕ ಪ್ರಿಯಕರನ ಜಾಲಕ್ಕೆ ಸಿಲುಕಿ ರೂ.2.3 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಅ.3ರಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನ ಪ್ರಕಾರ, 2019ರ ಡಿಸೆಂಬರ್ನಲ್ಲಿ ಮ್ಯಾಟ್ರಿಮೊನಿಯಲ್ಲಿ ಅಹಾನ್ ಕುಮಾರ್ ಎಂಬಾತನ ಪರಿಚಯವಾಗಿತ್ತು. ಆತ ತಾನು ಭಾರತ ಮೂಲದ ಅಮೇರಿಕಾ ಪ್ರಜೆಯೆಂದೂ, ಅಟ್ಲಾಂಟಾದಲ್ಲಿ ಇಸ್ರೇಲ್ ಆಯ್ಲ್ ಕಂಪನಿಯೊಂದರಲ್ಲಿ ಡ್ರಿಲ್ಲಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿಯೂ ಹೇಳಿದ್ದ. ಸಧ್ಯಕ್ಕೆ ಬ್ಲ್ಯಾಕ್ ಸೀ ನಲ್ಲಿ ಕೆಲಸನಿರ್ವಹಿಸುತ್ತಿರುವುದಾಗಿ ತನ್ನ ಗುರುತಿನ ಚೀಟಿಯನ್ನೂ ತೋರಿಸಿದ್ದ. ಅದರಲ್ಲಿ ಆತನ ಫೋಟೋದ ಸುಳಿವಿಲ್ಲದಿದ್ದರೂ ನಿವೃತ್ತ ಶಿಕ್ಷಕಿಗೆ ಆತನ ಮೇಲೆ ಅನುಮಾನ ಬರಲಿಲ್ಲ.
2.3 ಕೋಟಿ ರೂ ದೋಚಿದ ಯುವಕ ಪರಾರಿ
ಕಾಲಕ್ರಮೇಣ ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಪ್ರಿತಿಗೂ ತಿರುಗಿತ್ತು. ಅಹಾನ್ ಕೂಡ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿದ್ದ. ಪ್ರತಿನಿತ್ಯ ವಾಟ್ಸಾಪ್ ಮೂಲಕ ಮಾತನಾಡುತ್ತಿದ್ದ ಅಹಾನ್, ಭಾರತಕ್ಕೆ ಶೀಘ್ರದಲ್ಲಿಯೇ ಮರಳುವುದಾಗಿಯೂ ತಿಳಿಸಿದ್ದ. ಹೀಗೆ ಪ್ರತಿನಿತ್ಯ ಅವರಿಬ್ಬರ ಮಾತುಕತೆ ಸಾಗುತ್ತಲಿತ್ತು. 2020 ರಲ್ಲಿ ಆತ ತನಗೆ ಸಂಬಳ ವಿಳಂಬವಾಗುತ್ತಿದೆ, ಊಟ ಮಾಡಲೂ ತನ್ನ ಬಳಿ ಹಣವಿಲ್ಲವೆಂದು ಹೇಳಿ ಮಹಿಳೆಯ ಬಳಿ ಆರ್ಥಿಕ ಸಹಾಯ ಬೇಡಿದ್ದ. ಇದನ್ನು ನಂಬಿ ಆಕೆಯೂ ಹಣವನ್ನು ಮಾಧವಿ ಎನ್ನುವವರ ಖಾತೆಗೆ ಹಣ ಕಳುಹಿಸಿದ್ದರು. ನಂತರದ 4 ವರ್ಷಗಳ ಕಾಲ ಹೀಗೆಯೆ ಆಸ್ಪತ್ರೆಯ ಬಿಲ್, ಇತರೆ ಶುಲ್ಕದ ಹೆಸರಿನಲ್ಲಿ ಅಹಾನ್ ಹಣ ಕೇಳುತ್ತಲೇ ಇದ್ದ. ಅವನನ್ನು ನಂಬಿ ಮಹಿಳೆ ಹಣ ಕಳುಹಿಸುತ್ತಲೇ ಇದ್ದರು.
2024ರ ನವೆಂಬರ್ ಹೊತ್ತಿಗೆ ಅವನ ಬಡಿಕೆಯಿಂದ ಬೇಸತ್ತಿದ್ದ ಮಹಿಳೆ, ಹಣ ನೀಡುವುದನ್ನು ಕ್ರಮೇಣ ನಿಲ್ಲಿಸಿದ್ದರು. ಅವರು ಆರ್ಥಿಕ ನೆರವು ನಿಲ್ಲಿಸುತ್ತಿದ್ದಂತೆ ಆತ ಕೂಡ ಕ್ರಮೇಣ ಸಂಪರ್ಕ ಮಾಡುವುದನ್ನು ಬಿಟ್ಟಿದ್ದ. ಸುಮಾರು ಒಂದು ವರ್ಷಗಳ ಕಾಲ ಆತ ಹಣವನ್ನು ಹಿಂದಿರುಗಿಸುತ್ತಾನೆಂದು ಮಹಿಳೆ ಕಾಯುತ್ತಲೇ ಇದ್ದರು. ಕೊಟ್ಟ ಹಣ ವಾಪಾಸ್ ಬರದ ಕಾರಣ ಮಹಿಳೆ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸ್ ಅಧಿಕಾರಿಗಳು ಐಟಿ ಆ್ಯಕ್ಟ್ ಅಡಿಗೆ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.