57 ವರ್ಷಗಳ ಸರ್ಕಾರಿ ಭೂಮಿಗೆ ಬಂಗಾರದ ಬೆಲೆ – ಸ್ಥಳೀಯರ ವಿರೋಧ

ಕೋಲಾರ :ಮಾಲೂರು ಪಟ್ಟಣದ ಹೊಸೂರು ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಸರ್ಕಾರ 57 ವರ್ಷಗಳ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಈ ಭೂಮಿ ಈಗಿನ ಲೆಕ್ಕಾಚಾರದಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಆದರೆ, ಈ ಭೂಮಿ ಪಿಡಬ್ಲ್ಯುಡಿ ಇಲಾಖೆಗೆ ಸೇರಿದ ಹಲವು ಜನರಿಂದ ಒತ್ತುವರಿಯಾಗಿದೆ. ಬುಧವಾರ (ಏ.09) ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿಯಾದ ಜಾಗದ ಗಡಿ ಗುರುತು ಮಾಡಿದ್ದು, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ಮಾಲೂರು ಪಟ್ಟಣದ ಹೊಸೂರು ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಹಾಗೂ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕಾಗಿ ಸರ್ಕಾರ 1968-70 ರಲ್ಲಿ ರೈತರಿಗೆ ಪರಿಹಾರ ನೀಡಿ ಭೂ ಸ್ವಾಧೀನಪಡಿಸಿಕೊಂಡಿತ್ತು. ರಸ್ತೆ ಹಾಗೂ ರೈಲ್ವೆ ಲೈನ್ ನಿರ್ಮಾಣ ಮಾಡಿದ ನಂತರ 16.13 ಎಕರೆ ಜಾಗ ಉಳಿದಿದೆ. ಆದರೆ, ಈ ಜಾಗವನ್ನು ಪಿಡಬ್ಲ್ಯುಡಿ ಇಲಾಖೆ ಯಾವುದೇ ಕೆಲಸಕ್ಕೆ ಬಳಕೆ ಮಾಡದ ಹಿನ್ನೆಲೆಯಲ್ಲಿ ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಸುಮಾರು 24 ಸರ್ವೆ ನಂಬರ್ಗಳಲ್ಲಿ ಭೂಮಿ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆ ವರದಿ ನೀಡಿದೆ.
ಅಲ್ಲದೇ, ಒತ್ತುವರಿ ಮಾಡಿದವರಲ್ಲಿ ಸಾಕಷ್ಟು ಜನ ಪ್ರಭಾವಿಗಳೇ ಇದ್ದು, ಅವರಲ್ಲಿ ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಿನ್ನೆಲೆ ಇರುವವರು ಇದ್ದಾರೆ ಎನ್ನಲಾಗಿದೆ. ಸದ್ಯ, ಪಿಡಬ್ಲ್ಯುಡಿ ಇಲಾಖೆ ಒತ್ತುವರಿಯಾಗಿರುವ ತಮ್ಮ ಭೂಮಿಯ ಗಡಿ ಗುರುತು ಮಾಡಲು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು. ಗಡಿ ಗುರುತು ಮಾಡುವ ಕೆಲಸಕ್ಕೆ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಅವರನ್ನು ಸಮಾಧಾನಪಡಿಸಿದರು. ಇವತ್ತಿಗೆ, ಈ ಭೂಮಿಗೆ ಬಂಗಾರದ ಬೆಲೆ ಇದೆ. ಸುಮಾರು 150 ಕೋಟಿ ರೂಪಾಯಿಯಷ್ಟು ಬೆಲೆ ಬಾಳುವ ಆಸ್ತಿ ಇದಾಗಿದ್ದು ಅದರ ಗಡಿ ಗುರುತು ಮಾಡಿ ಆದಷ್ಟು ಬೇಗ ಒತ್ತುವರಿ ತೆರವು ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.