ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ 5,676 ಸಿಬ್ಬಂದಿ ವರ್ಗಾವಣೆ: ಕೌನ್ಸೆಲಿಂಗ್ ಮೂಲಕ ಪಾರದರ್ಶಕ ಪ್ರಕ್ರಿಯೆ

ಬೆಂಗಳೂರು: ಎಂಟು ವರ್ಷಗಳ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಸಿಬ್ಬಂದಿ ಮತ್ತು ಉದ್ಯೋಗಿಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಹೇಳಿದ್ದಾರೆ.

ಆರೋಗ್ಯ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 19 ರಿಂದ ಜುಲೈ 3 ರವರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದ್ದು, 5,676 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ.
ಇವರಲ್ಲಿ 21 ಮಂದಿ ಗ್ರೂಪ್ ಎ, 15 ಮಂದಿ ಗ್ರೂಪ್ ಬಿ, 4,046 ಮಂದಿ ಗ್ರೂಪ್ ಸಿ ಮತ್ತು 680 ಮಂದಿ ಗ್ರೂಪ್ ಡಿ ಗೆ ಸೇರಿದ್ದಾರೆ ಎಂದು ಹೇಳಿದರು.
ಆರೋಗ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತ ಹಾಗೂ ಪಾರದರ್ಶಕವಾಗಿ ನಡೆಸಿದ್ದು, ಬೆಂಗಳೂರಿನ ಆಯಕಟ್ಟಿನ ಜಾಗದಲ್ಲಿ ಉಳಿದಿದ್ದ ಹಲವು ಅಧಿಕಾರಿಗಳನ್ನು ಜಿಲ್ಲೆಯ ಹೊರಗೆ ಕಳುಹಿಸಿರುವುದು ಸೇರಿದಂತೆ ಒಟ್ಟು 5,676 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳ ತಾಯಿ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ದೀರ್ಘಕಾಲದಿಂದ ಖಾಲಿಯಿದ್ದ ಹುದ್ದೆಗಳ ಭರ್ತಿಗೆ ಆಧ್ಯತೆ ನೀಡಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ ಒಬ್ಬರು ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಇರುವಂತೆ ವರ್ಗಾವಣೆ ಪ್ರಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೇ ವಿಶೇಷವಾಗಿ ಪ್ರತಿಯೊಂದು ತಾಲೂಕು ಆಸ್ಪತ್ರೆಗಳಲ್ಲಿ ಇಬ್ಬರು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಅರವಳಿಕೆ ತಜ್ಞರು ನೇಮಕ ಮಾಡಲು ಕ್ರಮ ವಹಿಸಲಾಗುತ್ತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯಲಾಗುವುದು. ಇದರಿಂದಾಗಿ ತಾಲೂಕು ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ವೈದ್ಯರು ಲಭ್ಯತೆಯಿರಲಿದೆ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಎರಡು ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 185 ತಜ್ಞರ ಕೊರತೆ ಇದೆ. ಇದನ್ನು ನೀಗಿಸಲು ಸರ್ಕಾರಿ ವೈದ್ಯಕೀಯ ಸೀಟು ಪಡೆದು ಸರ್ಕಾರಿ ಹಾಗೂ ಖಾಸಗಿಯಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ 6 ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 119 ತಜ್ಞರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಆಶಾ ಕಾರ್ಯಕರ್ತೆ ಯರ ನೇಮಕಾತಿಗೆ ಎಸ್ಎಸ್ಎಲ್ಸಿ ವಿದ್ಯಾರ್ಹ ತೆಯನ್ನು ನಿಗದಿಪಡಿಸಲಾಗಿದ್ದು, ಇನ್ನು ಮುಂದೆ ಆಶಾಗಳ ನೇಮಕಾತಿಯಲ್ಲಿ ಇದು ಅನ್ವಯವಾಗಲಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ರಾಜ್ಯದಲ್ಲಿ 15 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಇವರಿಗೆ ಟೀಮ್ ಬೇಸ್ ಇನೆಂಟಿವ್ ಒಂದು ಸಾವಿರ ಹೆಚ್ಚಿಸಲಾಗಿದೆ. ರಾಜ್ಯ ಮತ್ತು ಕೇಂದ್ರವು 60:40 ಅನುಪಾತದಲ್ಲಿ ಅನುದಾನ ನೀಡಲಾಗುತ್ತಿದೆ ಎಂದರು.
