ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ₹15 ಲಕ್ಷಕ್ಕೆ ಮಾರಾಟ: ಅಭಿಮಾನಿಗಳಿಗೆ ಎಚ್ಚರಿಕೆ

ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ 2025 ರ ಟಿ20 ಏಷ್ಯಾಕಪ್ (Asia Cup 2025) ಆರಂಭವಾಗಲಿದೆ. 8 ತಂಡಗಳ ನಡುವಿನ ಈ ಪಂದ್ಯಾವಳಿಯಲ್ಲಿ, ಟೀಂ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆ ಬಳಿಕ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ. ಈ ಪಂದ್ಯಾವಳಿಯ ಟಿಕೆಟ್ ಮಾರಾಟ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಆದರೆ ಇದಕ್ಕೂ ಮುಂಚೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಕಾಳ ಸಂತೆಯಲ್ಲಿ 15 ಲಕ್ಷ ರೂ.ಗೆ ಮಾರಾಟವಾಗುತ್ತಿವೆ ಎಂಬ ಸುದ್ದಿ ಹೊರಬಿದ್ದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಕಾಳ ಸಂತೆಯಲ್ಲಿ ಹಾಗೂ ಅನಧಿಕೃತ ವೆಬ್‌ಸೈಟ್‌ಗಳಲ್ಲಿ 15.75 ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿವೆ ಎಂದು ಇನ್‌ಸೈಡ್‌ಸ್ಪೋರ್ಟ್ ವರದಿ ಮಾಡಿದೆ. ಆದಾಗ್ಯೂ, ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಭಾನ್ ಅಹ್ಮದ್ ಈ ವಂಚನೆಯ ಬಗ್ಗೆ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ‘ಅಭಿಮಾನಿಗಳು ಅನಧಿಕೃತ ವೆಬ್‌ಸೈಟ್‌ಗಳ ವಂಚನೆಗೆ ಬಲಿಯಾಗದಂತೆ ಸಲಹೆ ನೀಡಿದ್ದಾರೆ. ಅಲ್ಲದೆ ಮಾರಾಟ ಪ್ರಾರಂಭವಾದ ನಂತರವೇ ಅಧಿಕೃತ ವೆಬ್‌ಸೈಟ್‌ನಿಂದ ಟಿಕೆಟ್‌ಗಳನ್ನು ಖರೀದಿಸುವಂತೆ ಕ್ರಿಕೆಟ್ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ
ಅಭಿಮಾನಿಗಳಿಗೆ ಸಲಹೆ ನೀಡಿದ ಎಸಿಸಿ
ಏಷ್ಯಾಕಪ್ ಟಿಕೆಟ್‌ಗಳನ್ನು ಕೆಲವು ನಕಲಿ ವೆಬ್‌ಸೈಟ್‌ಗಳು ಈಗಾಗಲೇ ಮಾರಾಟ ಮಾಡಲು ಪ್ರಾರಂಭಿಸಿವೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳ ಬೆಲೆ 26,256 ರೂ.ಗಳಿಂದ ಪ್ರಾರಂಭವಾಗಿ 15.75 ಲಕ್ಷ ರೂ.ಗೆ ತಲುಪಿದೆ. ಹೀಗಾಗಿ ಅನಧಿಕೃತ ವೆಬ್‌ಸೈಟ್‌ಗಳಿಂದ ಟಿಕೆಟ್ ಖರೀದಿಸುವವರಿಗೆ ಇಸಿಬಿ ಸಿಒಒ ಸುಭಾನ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
ಈ ಅನಧಿಕೃತ ವೆಬ್‌ಸೈಟ್‌ಗಳಲ್ಲಿ ಲೀಗ್ ಹಂತದ ಪಂದ್ಯಗಳ ಟಿಕೆಟ್‌ಗಳು ಮಾತ್ರವಲ್ಲದೆ ಸೆಪ್ಟೆಂಬರ್ 21 ರಂದು ನಡೆಯಲಿರುವ ಸೂಪರ್ 4 ಪಂದ್ಯಗಳ ಟಿಕೆಟ್‌ಗಳು ಕೂಡ ಈಗಾಗಲೇ ಮಾರಾಟವಾಗುತ್ತಿವೆ. ಭಾರತ ಮತ್ತು ಪಾಕಿಸ್ತಾನ ಮಾತ್ರವಲ್ಲದೆ ಭಾರತ vs ಯುಎಇ ಮತ್ತು ಭಾರತ vs ಓಮನ್ ಸೇರಿದಂತೆ ಇತರ ಪಂದ್ಯಗಳ ಟಿಕೆಟ್‌ಗಳನ್ನು ಸಹ ಅನಧಿಕೃತ ವೆಬ್‌ಸೈಟ್‌ಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಭಾರತದ ಜೊತೆಗೆ ಪಾಕಿಸ್ತಾನದ ಪಂದ್ಯಗಳ ಟಿಕೆಟ್‌ಗಳನ್ನು ಸಹ ಈ ವೆಬ್‌ಸೈಟ್‌ಗಳಲ್ಲಿ ಮಾರಾಟಕ್ಕೆ ಇಡಲಾಗಿದೆ.
