ಟ್ರಾಫಿಕ್ ದಂಡಕ್ಕೆ ಶೇ. 50 ರಿಯಾಯಿತಿ: ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ ₹21 ಕೋಟಿ ದಂಡ ಸಂಗ್ರಹ!

ಬೆಂಗಳೂರು:ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೇಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಸರ್ಕಾರ 50% ಡಿಸ್ಕೌಂಡ್ ನೀಡಿದ್ದು, ವಾಹನ ಮಾಲೀಕರು ಈ ಆಫರ್ ಅನ್ನು ಭರ್ಜರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂಕರವೆಂಬಂತೆ ಬೆಂಗಳೂರಿನಲ್ಲಿ (Bengaluru) ಒಂದೇ ವಾರದಲ್ಲಿ ಬರೋಬ್ಬರಿ 21 ಕೋಟಿ 86 ಸಾವಿರ ರೂ. ದಂಡದ ಹಣ ಸಂಗ್ರಹವಾಗಿದೆ. ಇದರೊಂದಿಗೆ 50% ಡಿಸ್ಕೌಂಟ್ ಆಫರ್ ಶುರುವಾದ ಒಂದು ವಾರದೊಳಗೆ ಅಂದ್ರೆ ಆಗಸ್ಟ್ 23ರಿಂದ ಆಗಸ್ಟ್ 29ರವರೆಗೆ 7,43,160 ಬಾಕಿ ಕೇಸ್‌ಗಳಿಗೆ ವಾಹನ ಮಾಲೀಕರು ದಂಡ ಪಾವರಿಸಿದ್ದಾರೆ.

ಆಗಸ್ಟ್ 21ರಂದು ಟ್ರಾಫಿಕ್ ಫೈನ್‌ಗೆ 50% ಡಿಸ್ಕೌಂಟ್ ಆದೇಶ ನೀಡಲಾಗಿತ್ತು. ಆ.23 ರಿಂದ ಸೆ.12 ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ವಾಹನ ಸವಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಕಳೆದ ಆರು ದಿನದಲ್ಲಿ 7,43,160 ಕೇಸ್ ವಿಲೇವಾರಿ ಮಾಡಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.
ಬೆಂಗಳೂರು (Bengaluru) ವ್ಯಾಪ್ತಿಗೆ ಮಾತ್ರ ಈ ಡಿಸ್ಕೌಂಡ್ ನೀಡಿದ್ದು, ವಾಹನ ಸವಾರರ ರಿಯಾಕ್ಷನ್ ನೋಡಿಕೊಂಡು ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕೇ ಬೇಡವೇ ಅನ್ನೋದು ತೀರ್ಮಾನ ಮಾಡುವ ಸಾಧ್ಯತೆ ಇದೆ. ಇನ್ನೂ ಹತ್ತು ದಿನಗಳ ಕಾಲ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಅವಕಾಶವಿದೆ. 2019ರಿಂದ ಸಂಗ್ರಹವಾಗಿರುವ ಸುಮಾರು 3 ಕೋಟಿ ಬಾಕಿ ಕೇಸ್‌ಗಳ ಪೈಕಿ ಈ ಸಂಖ್ಯೆ ಗಮನಾರ್ಹವಾಗಿದೆ. ಒಟ್ಟು 1,100 ಕೋಟಿ ಬಾಕಿ ದಂಡವಿದೆ ಎಂದು ಮೂಲಗಳು ತಿಳಿದುಬಂದಿದ್ದು, ಸುಮಾರು 50 ಕೋಟಿಯಷ್ಟು ದಂಡ ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ ಸರ್ಕಾರವು ಆಗಸ್ಟ್ 21, 2025 ರಂದು ಈ 50% ರಿಯಾಯಿತಿ ಯೋಜನೆಯನ್ನು ಘೋಷಿಸಲಾಗಿತ್ತು. ಇದು ಫೆಬ್ರವರಿ 11, 2023ಕ್ಕಿಂತ ಮೊದಲಿನ ಎಲ್ಲಾ ಬಾಕಿ ಇ-ಚಲನ್‌ಗಳಿಗೆ ಅನ್ವಯಿಸುತ್ತದೆ. ಈ ರಿಯಾಯಿತಿಯು ವಾಹನ ಮಾಲೀಕರಿಗೆ ತಮ್ಮ ದಂಡವನ್ನು ಅರ್ಧದಷ್ಟು ಬೆಲೆಗೆ ಪಾವತಿಸಲು ಅವಕಾಶ ನೀಡುತ್ತದೆ. ಉದಾಹರಣೆಗೆ 1000 ದಂಡವಿದ್ದರೆ, ಕೇವಲ 500 ಪಾವತಿಸಿದರೆ ಸಾಕು. ಈ ಯೋಜನೆಯು ಸೆಪ್ಟೆಂಬರ್ 12, 2025ರವರೆಗೆ ಮಾತ್ರ ಲಭ್ಯವಿದ್ದು, ಆನಂತರ ಪೂರ್ಣ ದಂಡವನ್ನು ಪಾವತಿಸಬೇಕಾಗುತ್ತದೆ.
ಈ ರಿಯಾಯಿತಿ ಯೋಜನೆಗೆ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಇದೇ ಸಿಕ್ಕಿದ್ದೇ ಚಾನ್ಸ್ ಎಂದು ಉತ್ಸಾಹದಿಂದ ಹಳೇ ಕೇಸಿನ ಬಾಕಿ ದಂಡವನ್ನು ಪಾವತಿಸುತ್ತಿದ್ದಾರೆ. ಮೊದಲ ದಿನವೇ (ಆಗಸ್ಟ್ 23) 1,48,747 ಕೇಸ್‌ಗಳನ್ನು ತೆರವುಗೊಳಿಸಲಾಗಿದ್ದು, ಇದಿರಂದ 4.18 ಕೋಟಿ ರೂ. ದಂಡದ ಹಣ ಸಂಗ್ರಹವಾಗಿತ್ತು.
ಆಗಸ್ಟ್ 28ರ ವೇಳೆಗೆ 6.7 ಲಕ್ಷ ಕೇಸ್‌ಗಳಿಂದ 18.9 ಕೋಟಿ ರೂ. ಸಂಗ್ರಹವಾಗಿತ್ತು. ಈಗ ಒಂದು ವಾರದಲ್ಲಿ ಒಟ್ಟು 21.86 ಕೋಟಿ ವಸೂಲಾಗಿದ್ದು, 7,43,160 ಕೇಸ್‌ಗಳು ತೆರವುಗೊಂಡಿವೆ
