ಹೊನ್ನಾಳಿ ಪುರಸಭೆಗೆ ₹5 ಲಕ್ಷ ಬಾಕಿ ಬಾಡಿಗೆ ಸಂಗ್ರಹ: 23 ಮಳಿಗೆಗಳಿಗೆ ಬೀಗ, ಒತ್ತುವರಿ ತೆರವಿಗೆ ಎಚ್ಚರಿಕೆ

ಹೊನ್ನಾಳಿ: ಪುರಸಭೆ ವ್ಯಾಪ್ತಿಯಲ್ಲಿರುವ ಅಂದಾಜು 73 ಮಳಿಗೆಗಳಿಂದ ಉಳಿಸಿಕೊಂಡಿದ್ದ ಬಾಡಿಗೆಯ ಬಾಕಿ ಮೊತ್ತ ₹ 65 ಲಕ್ಷ ವಸೂಲಿಗೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರು ಜೂನ್ 23ರಂದು ದಿಟ್ಟ ಕ್ರಮ ಕೈಗೊಂಡಿದ್ದರ ಪರಿಣಾಮ ₹ 5 ಲಕ್ಷ ಬಾಕಿ ಬಾಡಿಗೆ ಮೊತ್ತ ಸಂಗ್ರಹವಾಗಿದೆ.

ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಅವರು ಬಾಡಿಗೆ ಬಾಕಿ ವಸೂಲಿ ಹಾಗೂ ವಿದ್ಯುತ್ ಶುಲ್ಕ ಬಾಕಿ ವಸೂಲಿಗೆ ತಮ್ಮ ಸಿಬ್ಬಂದಿ ಮೂಲಕ ಸೂಚನೆ ನೀಡಿದ್ದರೂ ಬಾಡಿಗೆದಾರರು ಬಾಕಿ ಮೊತ್ತವನ್ನು ಪಾವತಿಸಿರಲಿಲ್ಲ. ಇದರಿಂದ ಮೂರು ವಾರಗಳ ಹಿಂದೆ ಬಾಡಿಗೆದಾರರಿಗೆ ಒಮ್ಮೆ ನೋಟಿಸ್ ಮೂಲಕ, ನಂತರ ಮೌಖಿಕವಾಗಿ ಬಾಕಿ ಇರುವ ಬಾಡಿಗೆ ಪಾವತಿಸುವಂತೆ ಸೂಚನೆ ನೀಡಿದರು.
ಮೂರು ವಾರ ಕಳೆದರೂ ಬಾಕಿ ಕಟ್ಟದ ಬಾಡಿಗೆದಾರರ ನಿರ್ಲಕ್ಷ್ಯದಿಂದ ಬೇಸತ್ತ ಅವರು, ತಮ್ಮ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿಯೊಂದಿಗೆ ಬಾಡಿಗೆ ನೀಡದ ಮಳಿಗೆಗಳಿಗೆ ಭೇಟಿ ನೀಡಿ ಬೀಗ ಜಡಿಯಲು ಮುಂದಾದರು. ಇದರಿಂದ ಕೆಲವರು ತಮ್ಮ ಅಂಗಡಿಗಳಿಗೆ ಬೀಗ ಬೀಳುವ ಭಯದಿಂದ ಸ್ಥಳದಲ್ಲಿಯೇ ತಮ್ಮ ಬಾಕಿ ಮೊತ್ತವನ್ನು ಪಾವತಿಸಿದರು.
ಉಳಿದಂತೆ 23 ಮಳಿಗೆಗಳ ಬಾಡಿಗೆದಾರರು ಬಾಕಿ ಹಣ ಕಟ್ಟದಿರುವುದರಿಂದ ಅವರ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ.

ಕೆಲವು ಬಾಡಿಗೆದಾರರು ಅಂದಾಜು 60 ತಿಂಗಳಿಂದಲೂ ಬಾಡಿಗೆ ಹಣವನ್ನು ಕಟ್ಟಿಲ್ಲ. ಇನ್ನು ಕೆಲವರು 20 ತಿಂಗಳು, 10 ತಿಂಗಳ ಬಾಕಿಯನ್ನು ಉಳಿಸಿಕೊಂಡಿದ್ದಾರೆ. ಅಂಥವರ ಮಳಿಗೆಗಳಿಗೆ ಬೀಗ ಹಾಕಲಾಗಿದೆ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು. ಎರಡು- ಮೂರು ತಿಂಗಳ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಬಾಡಿಗೆದಾರರಿಗೆ ಸಮಯಾವಕಾಶ ನೀಡಿದರು.
ಜೊತೆಗೆ ಕೆಲ ಮಳಿಗೆಗಳ ವಿದ್ಯುತ್ ಶುಲ್ಕ ಕೂಡಾ ಇದ್ದು, ಒಟ್ಟು ₹ 3 ಲಕ್ಷ ಬಾಕಿ ಇದೆ. ಬೆಸ್ಕಾಂನವರು ಸೋಮವಾರ ಬಾಕಿ ಉಳಿಸಿಕೊಂಡಿರುವ ಮಳಿಗೆಗಳ ವಿದ್ಯುತ್ ಕಡಿತ ಮಾಡಿದರು. ವಿದ್ಯುತ್ ಶುಲ್ಕ ಪಾವತಿಸುವವರೆಗೂ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಳಿಗೆ ಮುಂಭಾಗದ ಜಾಗ ಒತ್ತುವರಿ ತೆರವು ಎಚ್ಚರಿಕೆ: ಪುರಸಭೆ ಒಡೆತನದ ಮಳಿಗೆಗಳನ್ನು ಬಾಡಿಗೆಗೆ ಪಡೆದಿರುವ ಕೆಲವರು ತಮ್ಮ ಮಳಿಗೆಯ ಮುಂಭಾಗದಲ್ಲಿನ 20 ಅಡಿಗೂ ಹೆಚ್ಚಿನ ಜಾಗವನ್ನು ಅತಿಕ್ರಮಿಸಿಕೊಂಡು ಮತ್ತೊಬ್ಬರಿಗೆ ಬಾಡಿಗೆ ನೀಡುವ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದವರಿಗೆ ಎಚ್ಚರಿಕೆ ನೀಡಿದ ಅವರು, ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿಕೊಂಡಿರುವವರಿಗೆ ಅವರೇ ತೆರವು ಮಾಡಿಕೊಳ್ಳಲು ಜೂನ್ 25ರವರೆಗೂ ಸಮಯ ನೀಡಿದ್ದಾರೆ. ‘ಇಲ್ಲದಿದ್ದಲ್ಲಿ 26ರಂದು ಒತ್ತುವರಿ ಶೆಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲು ಕ್ರಮ ವಹಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಎಂಜಿನಿಯರ್ ದೇವರಾಜ್, ಆರೋಗ್ಯಾಧಿಕಾರಿ ಪರಮೇಶ್ ನಾಯ್ಕ, ಕಂದಾಯ ವಸೂಲಿಗಾರರಾದ ಮೋಹನ್, ಸಾಕಮ್ಮ, ಪುನೀತ್ ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.
