ಕಾಂಪೌಂಡ್ ನಿರ್ಮಾಣವಾಗುವವರೆಗೂ ಶಾಲೆಗೆ ಹೋಗಲ್ಲವೆಂದು 4ನೇ ತರಗತಿ ವಿದ್ಯಾರ್ಥಿನಿಯ ಹಠ

ತುಮಕೂರು: ಶಾಲೆಯ ಕಾಂಪೌಂಡ್ ಗಾಗಿ ಶಾಲೆ ತೊರೆದ ಪುಟಾಣಿ ವಿದ್ಯಾರ್ಥಿನಿಯೋರ್ವಳು ತಾನು ಕಾಂಪೌಂಡ್ ನಿರ್ಮಿಸಿಕೊಡುವವರೆಗೂ ಸ್ಕೂಲಿಗೆ ಬರುವುದಿಲ್ಲವೆಂದು ಹಠ ಹಿಡಿದು ಕುಳಿತಿರುವ ಘಟನೆ ತುಮಕೂರಿನಲ್ಲಿ (Tumkur) ಗೃಹ ಸಚಿವ ಡಾ.ಜಿ ಪರಮೇಶ್ವರ (Dr G Parameshwar) ಸ್ವಕ್ಷೇತ್ರದಲ್ಲಿ ನಡೆದಿದೆ.

ಕಾಂಪೌಂಡ್ ನಿರ್ಮಿಸಲು ಕೋರಿ ಬಾಲಕಿ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದಿದ್ದಾಳೆ.
ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಬಲಾಢ್ಯರ ವಿರುದ್ಧ ತೊಡೆ ತಟ್ಟಿ ನಿಂತ ಬಾಲಕಿಯಾಗಿದ್ದಾಳೆ. ಪಿಎಂ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬಾಲಕಿ ನಿಮ್ಮಿಂದ ಉತ್ತರ ಸಿಗುವವರೆಗೂ ನಾನು ಶಾಲೆಗೆ ಹೋಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾಳೆ.
ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೊಬ್ಬರಿ 105 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಪಕ್ಕದಲ್ಲೇ ಕಲ್ಯಾಣ ಮಂಟಪವಿದ್ದು, ಆಟದ ಮೈದಾನದಲ್ಲಿ ಕಲ್ಯಾಣ ಮಂಟಪಕ್ಕೆ ಬರುವ ಕಾರು, ಬಸ್ಸು ವಾಹನಗಳು ನಿಲ್ಲುತ್ತಿವೆ. ಊಟ ಮಾಡಿದ ಎಂಜಲು ಎಲೆಗಳನ್ನೆಲ್ಲ ಶಾಲೆಯ ಆವರಣದಲ್ಲೇ ಎಸೆಯಲಾಗುತ್ತಿದೆ. ಎಂಜಲು ಎಲೆಯ ಮೇಲೆಯೇ ಮಕ್ಕಳ ಊಟ ಪಾಠ ನಡೆಯುತ್ತಿದೆ.
ಈ ಹಿಂದೆ 2024 ರಲ್ಲಿ ಬಿಇಓ ಗೆ ಪತ್ರ ಬರೆದು ಮನವಿ ಮಾಡಿದ್ದ ಸಿಮ್ರಾ ಸನೋಬರ್ ಕಾಂಪೌಂಡ್ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಳು. ಅಂದು ವಿದ್ಯಾರ್ಥಿನಿಗೆ ಕಾಂಪೌಂಡ್ ಕಟ್ಟಿಕೊಡುವ ಆಶ್ವಾಸನೆ ನೀಡಿದ್ದ ಬಿಇಓ, ಬಳಿಕ ಒಂದು ವರ್ಷ ಕಳೆದರೂ ಕಾಂಪೌಂಡ್ ನಿರ್ಮಾಣ ಮಾಡಿರಲಿಲ್ಲ.
ಇದರಿಂದ ನಮಗೆ ಆಟವಾಡಲು ತೊಂದರೆಯಾಗ್ತಿದೆ. ಕಾಂಪೌಂಡ್ ನಿರ್ಮಾಣ ಆಗೋವರೆಗೂ ಶಾಲೆಗೆ ಬರೊದಿಲ್ಲ ಎಂದು ಪತ್ರ ಸಿಮ್ರಾ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಬರೆದು ಮನವಿ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಯ ಹೋರಾಟಕ್ಕೆ ತಂದೆ ರಫೀಕ್ ಸಾಥ್ ನೀಡಿದ್ದು, ಬಾಲಕಿಯ ಬೇಡಿಕೆಗೆ ಬೆಂಬಲವಾಗಿ ನಿಂತಿದ್ದಾರೆ.
ಶಿಕ್ಷಣಾಧಿಕಾರಿಗಳು ಸ್ವತಃ ತಮ್ಮ ಕಚೇರಿಗೆ ಕರೆದು ಬಾಲಕಿಯೊಡನೆ ಮಾತುಕತೆ ನಡೆಸಿದರೂ ಸಹ ಬಾಲಕಿ ಕುಗ್ಗದೇ ಕಾಂಪೌಂಡ್ ನಿರ್ಮಾಣವಾಗುವವರೆಗೆ ನಾನು ಶಾಲೆಗೆ ಬರುವುದಿಲ್ಲ ಎಂದು ದಿಟ್ಟವಾಗಿ ಉತ್ತರಿಸಿದ್ದಾಳೆ.
ಬೆಳಧರ ಸರ್ಕಾರಿ ಶಾಲೆಯ ಆಟದ ಮೈದಾನದ ಕೌಪೌಂಡ್ ನಿರ್ಮಾಣದ ವಿಚಾರದ ವಿವಾದ ಸುಮಾರು ವರ್ಷಗಳಿಂದಲೂ ನಡೆಯುತ್ತಿದೆ. ಈಗಾಗಲೇ ಒಂದು ವರ್ಷದ ಹಿಂದೆ ಕಾಂಪೌಂಡ್ ನಿರ್ಮಾಣಕ್ಕಾಗಿ ಸುತ್ತಲೂ ಕಲ್ಲುಗಳನ್ನು ಹಾಕಲಾಗಿತ್ತು. ಆದರೆ, ಹಾಕಿದ್ದ ಕಲ್ಲುಗಳನ್ನು ಕಿತ್ತುಹಾಕಿ ಕಾಂಪೌಂಡ್ ನಿರ್ಮಿಸಲು ಕೆಲ ಪ್ರಭಾವಿ ವ್ಯಕ್ತಿಗಳು ಬಿಟ್ಟಿರಲಿಲ್ಲವಂತೆ. ಹಾಗಾಗಿ ಕಲ್ಲುಗಳನ್ನು ಕಿತ್ತುಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಣಾಧಿಕಾರಿಗೆ ದೂರನ್ನೂ ಕೊಟ್ಟಿದ್ದರಂತೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆ ಮುಂದೆಯೇ ಕಲ್ಯಾಣ ಮಂಟಪವಿದ್ದು, ಕಲ್ಯಾಣ ಮಂಟಪಕ್ಕೆ ಹೋಗುವವರೆಲ್ಲರೂ ಶಾಲಾ ಆಟದ ಮೈದಾನದ ಮೂಲಕವೇ ಹೋಗುತ್ತಾರಂತೆ. ವಾಹನಗಳನ್ನು ಸಹ ಅಲ್ಲಿಯೇ ನಿಲುಗಡೆ ಮಾಡುತ್ತಾರಂತೆ. ಹೀಗಾಗಿ ಕಾಪೌಂಡ್ ನಿರ್ಮಾಣ ಸಾಧ್ಯವಾಗಿಲ್ಲ ಎನ್ನಲಾಗಿದೆ