49,000 ಕೋಟಿ ವಂಚನೆ: ಪರ್ಲ್ಸ್ ಆಗ್ರೋ ಟೆಕ್ ನಿರ್ದೇಶಕ ಗುರ್ನಾಮ್ ಸಿಂಗ್ ಬಂಧನ!

ಲಖನೌ: ಐದು ಕೋಟಿಗೂ ಹೆಚ್ಚು ಹೂಡಿಕೆದಾರರಿಗೆ 49 ಸಾವಿರ ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಪರ್ಲ್ಸ್ ಆಗ್ರೋ ಟೆಕ್ ಕಾರ್ಪೆರೇಷನ್ ಲಿಮಿಟೆಡ್ (ಪಿಎಸಿಎಲ್)ನ ನಿರ್ದೇಶಕ ಗುರ್ನಾಮ್ ಸಿಂಗ್ ನನ್ನು ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ)ದ ಅಧಿಕಾರಿಗಳು ಬಂಧಿಸಿದ್ದಾರೆ.

ಪರ್ಲ್ಸ್ ಆಗ್ರೋ ಟೆಕ್ ಉತ್ತರ ಪ್ರದೇಶ, ಅಸ್ಸಾಂ, ಪಂಜಾಬ್, ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕೇರಳ, ಬಿಹಾರ ಮತ್ತು ಛತ್ತೀಸ್ಗಢದಲ್ಲಿ 5 ಕೋಟಿ ರೂ. ಹೆಚ್ಚು ಹೂಡಿಕೆದಾರರಿಂದ 49 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹೂಡಿಕೆಗಳನ್ನು
ಸಂಗ್ರಹಿಸಿ ವಂಚಿಸಿತ್ತು. ಈ ವಂಚನೆಯಲ್ಲಿ ಗುರ್ನಾಮ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಈ ವಂಚನೆ ಪ್ರಕರಣದ ಸಂಬಂಧ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿವೆ. ಸೆಬಿ ತನಿಖೆಯ ಬಳಿಕ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಇಒಡಬ್ಲ್ಯೂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗುರ್ನಾಮ್ ಸಿಂಗ್ ಸೇರಿ 10 ಜನರ ವಿರುದ್ಧ ದೂರು ದಾಖಲಾಗಿದ್ದು, ಇವರಲ್ಲಿ ನಾಲ್ವರು ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ.
ಏನಿದು ಹಗರಣ?
ಪಂಜಾಬ್ನಲ್ಲಿ ಹಾಲು ವ್ಯಾಪಾರ ಮಾಡುತ್ತಿದ್ದ ನಿರ್ಮಲ್ ಸಿಂಗ್ ಭಂಗೂ ಎಂಬಾತ ಪರ್ಲ್ಸ್ ಆಗ್ರೋಟೆಕ್ ಕಾರ್ಪೆರೇಷನ್ ಲಿಮಿಟೆಡ್ ಸ್ಥಾಪಿಸಿದ್ದ. ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡುವುದಾಗಿ ಹೂಡಿಕೆದಾರರಿಂದ ಹಣ ಸಂಗ್ರಹಿಸಿದ್ದ. ಇದೊಂದು ಪಿರಮಿಡ್ ಮಾದರಿಯ ಹೂಡಿಕೆ ವ್ಯವಸ್ಥೆಯಾಗಿತ್ತು. ಹೂಡಿಕೆದಾರರಿಗೆ ಭೂಮಿಯ ದಾಖಲೆ ನೀಡುವ ಬದಲಿಗೆ ಕೇವಲ ಹಣ ಪಡೆದಿದ್ದಕ್ಕೆ ರಶೀದಿ ನೀಡಲಾಗಿತ್ತು. ಹೂಡಿಕೆ ಹಣವನ್ನು ವಾಪಸ್ ಮಾಡದೆ ಕಂಪನಿ ವಂಚಿಸಿತ್ತು.
