43 ದಿನ, 1.22 ಕೋಟಿ ರೂ. – ಹುಲಿಗೆಮ್ಮ ದೇವಿಯ ಹುಂಡಿ ಮಹಿಮೆ!

ಕೊಪ್ಪಳ: ನಾಡಿನ ಆರಾಧ್ಯ ದೈವ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕೇವಲ 43 ದಿನದಲ್ಲಿ ಬರೊಬ್ಬರಿ 1.22 ಕೋಟಿ ರೂ. ಕಾಣಿಕೆ ಹುಂಡಿಗೆ ಆದಾಯ ಬಂದಿದೆ.
ಹುಲಿಗೆಮ್ಮ ದೇವಿಗೆ ಕೋಟ್ಯಾಂತರ ಭಕ್ತ ಸಮೂಹವಿದ್ದು ಪ್ರತಿ ಹುಣ್ಣಿಮೆ, ಅಮವಾಸ್ಯೆ ಸೇರಿದಂತೆ ಪ್ರತಿ ಶುಕ್ರವಾರ ಹಾಗೂ ಮಂಗಳವಾರದ ವಿಶೇಷ ವಾರಗಳಂದು ಲಕ್ಷಾಂತರ ಭಕ್ತರು ಹುಲಿಗೆಮ್ಮ ದೇವಿಯ ಸನ್ನಿಧಿಗೆ ಆಗಮಿಸುತ್ತಾರೆ.
ಈ ವೇಳೆ ದೇವಿಯ ಕಾಣಿಕೆ ಹುಂಡಿಗೆ ಅಪಾರ ಪ್ರಮಾಣದಲ್ಲಿ ಆದಾಯ ಹರಿದು ಬರುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯು ಕಳೆದ ಏ.23 ರಂದು ಕಾಣಿಕೆ ಹುಂಡಿಯನ್ನು ಇರಿಸಲಾಗಿತ್ತು. ಗುರುವಾರ ಕಾಣಿಕೆ ಹುಂಡಿಗಳ ಎಣಿಕೆ ಮಾಡಲಾಗಿದ್ದು ಕೇವಲ 43 ದಿನದಲ್ಲಿ 1,22,14,೦42 ರೂ. ನಗದು ಹಣವು ಭಕ್ತರಿಂದ ಕಾಣಿಕೆ ಹುಂಡಿಗೆ ಅರ್ಪಣೆಯಾಗಿದೆ.
ಎಣಿಕೆಯ ವೇಳೆ ಇಷ್ಟು ಮೊತ್ತ ಲಭಿಸಿದೆ. ದೇವಸ್ಥಾನಕ್ಕೆ ಕೇವಲ ನಗದು ಮಾತ್ರವಲ್ಲದೇ ಆಭರಣ ಹಾಗೂ ಧವಸ ಧಾನ್ಯವೂ ಹರಿದು ಬರುತ್ತಿದೆ. ಕಾಣಿಕೆ ಹುಂಡಿ ಎಣಿಕೆಯ ವೇಳೆ 308 ಗ್ರಾಂ ಕಚ್ಚಾ ಬಂಗಾರ ಹಾಗೂ 10 ಕೆಜಿ ಕಚ್ಚಾ ಬೆಳ್ಳಿ ಲಭಿಸಿದೆ. ದೇವಸ್ಥಾನದ ಆವರಣದಲ್ಲಿ ವಿವಿಧ ಬಿಗಿಭದ್ರತೆಯಲ್ಲಿ ನೂರಾರು ಭಕ್ತರು ದೇಣಿಗೆಯ ಕಾಣಿಕೆ ಹುಂಡಿಗಳ ಹಣವನ್ನು ಎಣಿಕೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ಒಪ್ಪಿಸಿ ಲೆಕ್ಕ ನೀಡಿದ್ದಾರೆ.