ದೇಶದ ನಗರಗಳಲ್ಲಿ ಶೇ. 40ರಷ್ಟು ಮಹಿಳೆಯರು ಅಸುರಕ್ಷಿತ: ‘ನಾರಿ 2025’ ವರದಿ ಬಹಿರಂಗ

ಇತ್ತೀಚೆಗಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (Assault) ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಏಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ. ಇದೀಗ ಮಹಿಳೆಯರ ಸುರಕ್ಷತೆಯ (NARI 2025) ಕುರಿತಾದ ರಾಷ್ಟ್ರೀಯ ವಾರ್ಷಿಕ ವರದಿ ಮತ್ತು ಸೂಚ್ಯಂಕ ಬಿಡುಗಡೆ ಮಾಡಿದ್ದು, ಇದರಲ್ಲಿ ಶೇ.40ರಷ್ಟು ನಗರದಲ್ಲಿ ಮಹಿಳೆಯರಿಗೆ ಸುರಕ್ಷಿತವಿಲ್ಲ ಎಂದು ವರದಿಯಾಗಿದೆ.

ಮಹಿಳೆಯರ ಸುರಕ್ಷಿತದ ಬಗ್ಗೆ ನಾರಿ 2025 ಎಂಬ ಹೆಸರಿನಲ್ಲಿ ಸರ್ವೇಯನ್ನು ಮಾಡಿದ್ದು, ಇದರಲ್ಲಿ ದೇಶದ 31 ನಗರಗಳಲ್ಲಿ ಒಟ್ಟು 12770 ಜನ ಮಹಿಳೆಯರನ್ನು ಮಾತನಾಡಿಸಲಾಗಿದೆ. ಅವರ ಹೇಳಿಕೆಯ ಆಧಾರದ ಮೇಲೆ ನಾರಿ 2025 ರಿಪೋರ್ಟ್ ಅನ್ನು ಸಿದ್ದಪಡಿಸಲಾಗಿದ್ದು, ಇದರ ವರದಿಯ ಪ್ರಕಾರ, ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತವಿಲ್ಲ ಎಂದು ತಿಳಿಸಿದೆ.
NARI 2025 ವರದಿಯ ಪ್ರಕಾರ, ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ, ಐಜ್ವಾಲ್, ಗ್ಯಾಂಗ್ಟಾಕ್, ಇಟಾಗರ್ ಮತ್ತು ಮುಂಬೈಗಳು ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತ ನಗರಗಳಾಗಿವೆ. ಈ ನಗರಗಳಲ್ಲಿ ಲಿಂಗ ತಾರತಮ್ಯ ಕಂಡುಬರುವುದಿಲ್ಲ. ಅಲ್ಲದೆ, ನಾಗರಿಕ ಭಾಗವಹಿಸುವಿಕೆ ಮತ್ತು ಪೊಲೀಸ್ ವ್ಯವಸ್ಥೆಯು ಮಹಿಳೆಯರಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದೆ.
ಅದೇ ರಾಂಚಿ, ಶ್ರೀನಗರ, ಕೋಲ್ಕತ್ತಾ, ದೆಹಲಿ, ಫರಿದಾಬಾದ್, ಪಾಟ್ನಾ ಮತ್ತು ಜೈಪುರ ನಗರಗಳಲ್ಲಿ ಮಹಿಳೆಯರು ಹೆಚ್ಚು ಅಸುರಕ್ಷಿತ ಪ್ರದೇಶ ಎಂದು ವರದಿಯಾಗಿದೆ. ಈ ನಗರದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ, ಕಿರುಕುಳ ನೀಡುವುದು, ಅವರೊಂದಿಗೆ ಅಸಭ್ಯವಾಗಿ ವರ್ತಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗುತ್ತದೆ.
ಅಷ್ಟೇ ಅಲ್ಲದೆ ಮಹಿಳೆಯರ ಮೇಲೆ ರಾತ್ರಿಯ ಸಮಯದಲ್ಲಿ ಹೆಚ್ಚಿನ ಕಿರುಕುಳ ನೀಡಲಾಗುತ್ತದೆ. ಸಾರ್ವಜನಿಕ ಸಾರಿಗೆ ಮತ್ತು ಸಿನಿಮಾ ಥಿಯೇಟರ್ ಗಳಲ್ಲಿ ಹೆಚ್ಚಾಗಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಲಾಗುತ್ತಿದೆ ಎಂದು ವರದಿಯಾಗಿದೆ.
ರಾಂಚಿ, ಶ್ರೀನಗರ, ಕೋಲ್ಕತ್ತಾ, ದೆಹಲಿ, ಫರಿದಾಬಾದ್, ಪಾಟ್ನಾ ಮತ್ತು ಜೈಪುರ ನಗರಗಳಲ್ಲಿ ಯುವತಿಯರು ಹೆಚ್ಚಾಗಿ ತಮ್ಮ ಕೆಲಸ, ಓದನು ನಿಲ್ಲಿಸಿ ಮನೆಯಲ್ಲೇ ಇರುತ್ತಾರೆ ಎಂದು ನಾರಿ 2025 ರ ವರದಿಯಲ್ಲಿ ತಿಳಿಸಲಾಗಿದೆ. ಸಮೀಕ್ಷೆಯ ಪ್ರಕಾರ ಶೇ. 7 ರಷ್ಟು ಯುವತಿಯರು ತಾವು ಕಿರುಕುಳಕ್ಕೆ ಬಲಿಯಾಗಿರುವುದಾಗಿ ತಿಳಿಸಿದ್ದು, ಇದರಲ್ಲಿ 18-24 ವರ್ಷ ವಯಸ್ಸಿನವರಾಗಿದ್ದಾರೆ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಸಮೀಕ್ಷೆಗೆ ಒಳಗಾದ ಹತ್ತು ಮಹಿಳೆಯರಲ್ಲಿ ಆರು ಜನರು ತಮ್ಮ ನಗರದಲ್ಲಿ ಸುರಕ್ಷಿತವೆಂದು ಭಾವಿಸಿದರೆ ಇನ್ನುಳಿದ ನಾಲ್ಕು ಜನ ಅಸುರಕ್ಷಿತ ಎಂದು ತಿಳಿಸಿದ್ದಾರೆ. ಈ ಮೂಲಕ ಶೇ. 40 ರಷ್ಟು ಜನರು ಇನ್ನೂ ತಾವು ಅಷ್ಟು ಸುರಕ್ಷಿತ ಅಥವಾ ಅಸುರಕ್ಷಿತರೆಂದು ಪರಿಗಣಿಸಿದ್ದಾರೆ.
ವರದಿಯ ಪ್ರಕಾರ, ದೇಶದಲ್ಲಿ ಕಿರುಕುಳಕ್ಕೆ ಒಳಗಾದ ಆರ್ಧದಷ್ಟು ಮಹಿಳೆಯರು ದೌರ್ಜನ್ಯದ ಬಗ್ಗೆ ವರದಿ ಮಾಡಿಲ್ಲ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಏಕೆಂದರೆ ದೂರು ನೀಡಿದರೆ ಮತ್ತೆ ಮುಂದೆ ಕಿರುಕುಳ ನೀಡಬಹುದು ಅಥವಾ ದೂರು ನೀಡಿದ ಮೇಲೆ ಸಮಾಜದಲ್ಲಿ ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ದೂರು ನೀಡಿಲ್ಲ ಎಂದು ಹೇಳಲಾಗಿದೆ.
ಕಿರುಕುಳಕ್ಕೆ ಒಳಗಾದವರ ಪೈಕಿ ಕೇವಲ ಶೇ. 22 ರಷ್ಟು ಮಹಿಳೆಯರು ಮಾತ್ರ ಅಧಿಕಾರಿಗಳಿಗೆ ದೂರು ನೀಡಲಾಗುತ್ತದೆ. ಮತ್ತು ಅದರಲ್ಲಿ ಕೇವಲ ಶೇ. 16 ರಷ್ಟು ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ನಾರಿ 2025 ಸಮೀಕ್ಷೆ ವರದಿ ಮಾಡಿದೆ. ಇನ್ನು ಶೇ. 53 ರಷ್ಟು ಮಹಿಳೆಯರಿಗೆ ತಮ್ಮ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ನೀತಿಯನ್ನು ಹೊಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ.