ಸಿಂಧೂ ನಾಗರಿಕತೆ ಮಾದರಿಯಲ್ಲಿ 3,500 ವರ್ಷಗಳ ಹಳೆಯ ನಗರ ಪೆರುವಿನಲ್ಲಿ ಪತ್ತೆ!

ನೀವು ಸಿಂಧೂ ನಾಗರಿಕತೆಯ ಬಗ್ಗೆ ಓದಿ ತಿಳಿದುಕೊಂಡಿರಬಹುದು. ಈ ನಾಗರಿಕತೆಯ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇದೀಗ ಸಿಂಧೂ ನಾಗರಿಕತೆಯ ಎರಡು ಪ್ರಮುಖ ನಗರಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ರೀತಿಯ 3,500 ವರ್ಷಗಳ ಹಳೆಯದಾದ ನಗರವನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ದಕ್ಷಿಣ ಅಮೆರಿಕದ ಪೆರು ದೇಶದಲ್ಲಿ ಈ ನಗರ ಪತ್ತೆಯಾಗಿದ್ದು, ಈ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿದೆ. ಪತ್ತೆಯಾಗಿರುವ ಈ ಪ್ರದೇಶ ಹೇಗಿದೆ ಎನ್ನುವ ಚಿತ್ರಣವನ್ನು ಈಗಾಗಲೇ ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಬಿಡುಗಡೆ ಮಾಡಲಾಗಿದೆ.

ಸಮುದ್ರ ಮಟ್ಟದಿಂದ ಸುಮಾರು 600 ಮೀಟರ್ ಎತ್ತರದಲ್ಲಿ ಕಲ್ಲು ಹಾಗೂ ಮಣ್ಣಿನ ಅವಶೇಷಗಳಿದ್ದು, ವೃತ್ತಾಕಾರದ ರಚನೆ ಇದೆ. ಇದು ಮಾರುಕಟ್ಟೆಯಂತೆ ಕಂಡು ಬರುತ್ತಿದ್ದು, 3,500 ವರ್ಷಗಳ ಹಿಂದೆ ಈ ಸ್ಥಳದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಉತ್ತರ ಬರಾಂಕಾ ಪ್ರಾಂತ್ಯದಲ್ಲಿ ಪತ್ತೆ ಆಗಿರುವ ಈ ನಗರವನ್ನು ಪೆನಿಕೊ ಎಂದು ಕರೆಯುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಸಂಶೋಧನೆಗಳು ಮುಂದುವರಿದಿದೆ.