3 ತಿಂಗಳಲ್ಲೇ 342 ಮಹಿಳೆಯರ ಅತ್ಯಾಚಾರ-ದೂರು ನೀಡಲು ಹೆದರುತ್ತಿರುವ ಮಹಿಳೆಯರು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಸದ್ಯ ಅಪರಾಧ ಪ್ರಕರಣಗಳು ವಿಪರೀತವಾಗಿ ಹೆಚ್ಚುತ್ತಿವೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ಘಟನೆಗಳು ಹೆಚ್ಚುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ, ಪರಿಸ್ಥಿತಿ ಕೈ ಮೀರಿ ಹೋಗಿದೆ.

ಈ ಕುರಿತು ಬಾಂಗ್ಲಾದೇಶದ ಮಾನವ ಹಕ್ಕುಗಳ ಕಾರ್ಯಕರ್ತರು ಕೆಲವು ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ಅಂಕಿ-ಅಂಶಗಳ ಪ್ರಕಾರ, 2025ರ ಮೊದಲ 3 ತಿಂಗಳಲ್ಲಿ ದೇಶದಲ್ಲಿ ಬರೋಬ್ಬರಿ 342 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ‘ಈ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು’ ಎಂದು ಅಂದಾಜಿಸಲಾಗಿದೆ. ಭಯದಿಂದಾಗಿ ಅನೇಕರು ದೂರು ನೀಡಿಲ್ಲ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇಲ್ಲಿನ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲ. ಆದ್ದರಿಂದ, ಅನೇಕರು ದೂರು ನೀಡುವುದನ್ನು ತಪ್ಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಲ್ಲಿ ಸುಮಾರು ಶೇಕಡ 87 ರಷ್ಟು ಮಹಿಳೆಯರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದರಲ್ಲಿ ಸಾಮೂಹಿಕ ಅತ್ಯಾಚಾರಗಳೂ ಸೇರಿವೆ. ಆರೋಪಿಗಳು ಮಕ್ಕಳು, ಅದರಲ್ಲಿ 6 ವರ್ಷದ ಮಕ್ಕಳನ್ನೂ ಗುರಿಯಾಗಿಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರು ಅಪ್ರಾಪ್ತ ವಯಸ್ಕರಾಗಿದ್ದಾರೆ.
ದೌರ್ಜನ್ಯಕ್ಕೊಳಗಾದ ಅನೇಕ ಮಹಿಳೆಯರ ಶವಗಳು ಪತ್ತೆಯಾಗಿವೆ, ಅವರ ದೇಹದಿಂದ ತಲೆಯನ್ನು ಬೇರ್ಪಡಿಸಲಾಗಿದೆ, ಮತ್ತು ಅವರ ತಲೆ ನಾಪತ್ತೆಯಾಗಿದೆ. ತಲೆ ಇಲ್ಲದ ಅನೇಕ ಮಹಿಳೆಯರ ಶವಗಳು ಪತ್ತೆಯಾಗಿವೆ. ಇದರಿಂದಾಗಿ ಈ ಮಹಿಳೆಯರನ್ನು ಗುರುತಿಸುವುದು ಇಲ್ಲಿನ ಪೊಲೀಸ್ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.
