ಮೇ ತಿಂಗಳಲ್ಲಿ 33 ಕೊರೊನಾ ಪ್ರಕರಣಗಳು: 9 ತಿಂಗಳ ಮಗುವಿಗೆ ಸೋಂಕು ದೃಢ

ಬೆಂಗಳೂರು: ಲಾಕ್‌ಡೌನ್‌ನಂತಹ ಹಿಂದೆಂದೂ ಕಂಡು ಕೇಳರಿಯದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದ ಕೊರೊನಾ ಇದೀಗ ಮತ್ತೆ ಕೆಲವು ದೇಶಗಳನ್ನು ಕಾಡಲು ಆರಂಭಿಸಿದೆ. ಕೊರೊನಾ ವೈರಸ್ನ ಹೊಸ ತಳಿ JN.1 ಆತಂಕ ಹುಟ್ಟಿಸುತ್ತಿದೆ. ಸಿಂಗಾಪುರ, ಹಾಂಕಾಂಗ್‌ನಲ್ಲಿ ತಲ್ಲಣ ಎಬ್ಬಿಸಿರುವ ಕೊರೊನಾ ಹೊಸ ತಳಿ ಈಗ ಕರ್ನಾಟಕದಲ್ಲಿ ನಿಧಾನಕೆ ಏರುಗತಿಯಲ್ಲಿ ಸಾಗುತ್ತಿದೆ. ಮೇ ತಿಂಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಜನವರಿಯಲ್ಲಿ ಮೂರು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಫೆಬ್ರವರಿಯಲ್ಲಿ ಕೇವಲ 1 ಕೇಸ್ ಪತ್ತೆಯಾಗಿತ್ತು. ಮಾರ್ಚ್‌ನಲ್ಲೂ ಮೂರು, ಏಪ್ರಿಲ್ ತಿಂಗಳಲ್ಲೂ ಕೇವಲ 3 ಕೇಸ್‌ಗಳು ದಾಖಲಾಗಿದ್ದವು. ಆದರೆ, ಮೇ ತಿಂಗಳು ಇನ್ನೂ ಮುಗಿದಿಲ್ಲ, ಆಗಲೇ 33 ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ 9 ತಿಂಗಳ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ 16 ಸಕ್ರಿಯ ಪ್ರಕರಣಗಳಿವೆ.
ಭಾರತದಲ್ಲಿ ಸದ್ಯ ಸಕ್ರಿಯ ಕೊವಿಡ್ ಕೇಸ್‌ಗಳ ಸಂಖ್ಯೆ 257 ಇದೆ. ಈ ಪೈಕಿ ಬಹುತೇಕ ಸೋಂಕಿತರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೀಗಾಗಿ ಆತಂಕ ಬೇಡ, ಎಚ್ಚರವಿರಲಿ ಸಾಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಇನ್‌ಫ್ಲುಯೆಂಜಾ ಮಾದರಿ ಅನಾರೋಗ್ಯ ಮತ್ತು ತೀವ್ರವಾದ ಉಸಿರಾಟದ ಸೋಂಕುಗಳ ಪ್ರಕರಣಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ಕೊರೊನಾ ಕೇಸ್‌ಗಳು ಪತ್ತೆಯಾಗ್ತಿದ್ದರೂ, ಸಾಂಕ್ರಾಮಿಕ ಎಂಬ ಮಟ್ಟದಲ್ಲಿ ಹರಡುತ್ತಿಲ್ಲ. ಹೀಗಾಗಿ ಆತಂಕ ಬೇಡ. ಜನಜಂಗುಳಿ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳುವುದು ಉತ್ತಮ ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ಡಾ.ಮೋಹನ್ ಸಲಹೆ ನೀಡಿದ್ದಾರೆ.
