ಸರ್ಕಸ್ ಸಾಹಸ ಪ್ರದರ್ಶನದ ವೇಳೆ ಕೆಳಗೆ ಬಿದ್ದು 27 ವರ್ಷದ ಕಲಾವಿದೆ ಸಾವು: ಜರ್ಮನಿಯಲ್ಲಿ ದುರಂತ

ಸರ್ಕಸ್ ಸಾಹಸ ಪ್ರದರ್ಶನದ ವೇಳೆ ಕೆಲಗೆ ಬಿದ್ದು, 27 ವರ್ಷದ ಸಾಹಸ ಕಲಾವಿದೆಯೊಬ್ಬರು ಹಠಾತ್ ಸಾವಿಗೀಡಾದ ದುರಂತ ಘಟನೆ ಜರ್ಮನಿಯಲ್ಲಿ ನಡೆದಿದೆ. 27 ವರ್ಷದ ಟ್ರಪೆಜ್ ಕಲಾವಿದೆ ಮರೀನಾ ಸಾವಿಗೀಡಾದವರು. ಪೂರ್ವ ಜರ್ಮನಿಯ ಬೌಟ್ಜೆನ್‌ನಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಈ ದುರಂತ ನಡೆದಿದೆ.

ಏಕವ್ಯಕ್ತಿ ಮಾಡುವಂತಹ ಸಾಹಸ ಬಿಪಾಲ್ ಬುಷ್ ಸರ್ಕಸ್ ವೇಳೆ ಘಟನೆ
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಸಾಹಸ ಕಲಾವಿದೆ ಮರೀನಾ ಮಕ್ಕಳು ಮಹಿಳೆಯರಿಂದ ತುಂಬಿದ ಪ್ರೇಕ್ಷಕರು ನೋಡು ನೋಡುತ್ತಿದ್ದಂತೆ ಅವರ ಕಣ್ಮುಂದೆಯೇ ಕೆಳಗೆ ಬಿದ್ದು ಹಠಾತ್ ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 28ರಂದು ಭಾನುವಾರ ಈ ಘಟನೆ ನಡೆದಿದೆ. ಕಲಾವಿದೆ ಮರೀನಾ ಬಿ ಪಾಲ್ ಬುಷ್ ಸರ್ಕಸ್‌ನಲ್ಲಿ ಏಕವ್ಯಕ್ತಿ ಮಾಡುವಂತಹ ಸಾಹಸವನ್ನು ಪ್ರದರ್ಶಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸ್ಪೇನ್‌ನ ಮಲ್ಲೋರ್ಕಾ ಮೂಲದ ಮರೀನಾ ಸುಮಾರು ಐದು ಮೀಟರ್ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ ಕೂಡಲೇ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ ಬಂದರೂ ಮರೀನಾಳನ್ನು ಬದುಕಿಸಿಕೊಳ್ಳಲಾಗಲಿಲ್ಲ, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಜರ್ಮನಿಯ ಸರ್ಕಸ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿರುವ ರಾಲ್ಫ್ ಹಪ್ಪರ್ಟ್ಜ್, ಮರೀನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಿರಬಹು ಎಂದು ಹೇಳಿದ್ದಾರೆ. ಮರೀನಾ ಅವರಂತಹ ಉತ್ತಮ ತರಬೇತಿ ಪಡೆದ ಕಲಾವಿದೆ ಆ ಎತ್ತರದಿಂದ ಬಿದ್ದು ಬದುಕುಳಿಯದಿರುವುದು ವಿಚಿತ್ರ ಎಂದು ಅವರು ಸ್ಥಳೀಯ ಮಾಧ್ಯಮ ಬಿಲ್ಡ್‌ಗೆ ತಿಳಿಸಿದ್ದಾರೆ.
ಬಹುಶಃ ಆಕೆ ಟ್ರಾಪಿಜ್ ಮೇಲಿದ್ದಾಗ ತಲೆ ತಿರುಗಲು ಶುರುವಾಗಿರಬಹುದು ಎಂದು ಅವರು ಹೇಳಿದ್ದಾರೆ. ಜರ್ಮನಿಯ ಬಿಲ್ಡ್ ಪತ್ರಿಕೆಗೆ ಮಾತನಾಡಿದ ಅವರು ಒಬ್ಬ ಸರ್ಕಸ್ ಕಲಾವಿದೆಗೆ ಏನಾಯಿತು ಎಂಬುದನ್ನು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದರು.
ಸುರಕ್ಷತಾ ಹಗ್ಗವನ್ನು ಬಳಸದ ಸಾಹಸ ಮಾಡ್ತಿದ್ದ ಮರೀನಾ
ಈ ನಡುವೆ ಪೊಲೀಸ್ ವಕ್ತಾರ ಸ್ಟೀಫನ್ ಹೈಡಕ್ ಅವರು ಮರೀನಾ ಸುರಕ್ಷತಾ ಹಗ್ಗವನ್ನು ಬಳಸುತ್ತಿರಲಿಲ್ಲ ಎಂದಿದ್ದಾರೆ. ಸುರಕ್ಷತಾ ಹಗ್ಗವನ್ನು ಬಳಸಬೇಕೆ ಬೇಡವೇ ಎಂಬುದನ್ನು ಅವಳು ಸ್ವತಃ ನಿರ್ಧರಿಸುತ್ತಾಳೆ. ಆ ಸಮಯದಲ್ಲಿ ಬೇರೆ ಯಾರೂ ರಿಂಗ್‌ನಲ್ಲಿ ಇರಲಿಲ್ಲ ಎಂದು ಅಲ್ಲಿನ ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಮರೀನಾ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರು ಹಗ್ಗವನ್ನು ಹಿಡಿದು ಹಾರುವ ಸಾಹಸ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಅವರು ಇಲ್ಲಿ, ನಾನು ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂಬ ಶೀರ್ಷಿಕೆ ಬರೆದಿದ್ದರು. ಈ ಪೋಸ್ಟ್ ಅನ್ನು ಕೆಲವೇ ವಾರಗಳ ಹಿಂದೆ ಹಂಚಿಕೊಳ್ಳಲಾಗಿತ್ತು. ಅವರು ಮತ್ತೊಂದು ಪೋಸ್ಟ್‌ನಲ್ಲಿ, ಕಲೆ ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ ಎಂದು ನಾನು ನಂಬುತ್ತೇನೆ ಎಂದು ಬರೆದಿದ್ದರು. ಈ ದುರಂತದ ನಂತರ ಈ ಸಾಹಸ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು.