‘ಹೇರಾ ಪೇರಿ 3’ ತೊರೆದ ಪರೇಶ್ ರಾವಲ್ ವಿರುದ್ಧ 25 ಕೋಟಿ ಮೊಕದ್ದಮೆ!

ನವದೆಹಲಿ :ಬಾಲಿವುಡ್ನ ಹಿರಿಯ ಮತ್ತು ಬೇಡಿಕೆಯ ಪೋಷಕ ನಟ. ಬಾಲಿವುಡ್ ಮಾತ್ರವೇ ಅಲ್ಲದೆ ತೆಲುಗು ಹಾಗೂ ಇತರೆ ಕೆಲವು ಭಾಷೆಗಳ ಸಿನಿಮಾಗಳಲ್ಲಿಯೂ ಸಹ ಪರೇಶ್ ರಾವಲ್ ನಟಿಸಿದ್ದಾರೆ. ಬಿಜೆಪಿಯ ಸಂಸದರೂ ಆಗಿದ್ದ ಪರೇಶ್ ರಾವಲ್, ಇತ್ತೀಚೆಗೆ ರಾಜಕೀಯದಿಂದ ಬಿಡುವು ಪಡೆದು ಕೇವಲ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ.

ಆದರೆ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಪರೇಶ್ ರಾವಲ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದು ಬರೋಬ್ಬರಿ 25 ಕೋಟಿ ರೂಪಾಯಿಗಳ ಪರಿಹಾರ ಕೊಡಬೇಕೆಂದು ಒತ್ತಾಯಿಸಿದೆ.
ಪರೇಶ್ ರಾವಲ್, ‘ಹೇರಾ ಪೇರಿ’ ಸಿನಿಮಾದ ಬಾಬು ಭಯ್ಯಾ ಪಾತ್ರದಿಂದಾಗಿ ಬಹಳ ಜನಪ್ರಿಯರು. ಬಾಬು ಭಯ್ಯ ಪಾತ್ರ ಪರೇಶ್ ರಾವಲ್ ಅವರಿಗೆ ಭಾರಿ ಜನಪ್ರಿಯತೆ ಮತ್ತು ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಟ್ಟಿದೆ. ಇತ್ತೀಚೆಗಷ್ಟೆ ನಿರ್ಮಾಣ ಸಂಸ್ಥೆಯಾದ ಕೇಪ್ ಆಫ್ ಗುಡ್ ಹೋಪ್ ಫಿಲಮ್ಸ್ ‘ಹೇರಾ ಪೇರಿ 3’ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. 20 ವರ್ಷಗಳ ಬಳಿಕ ‘ಹೇರಾ ಪೇರಿ 3’ ಸಿನಿಮಾ ಬರುತ್ತಿರುವ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಅಚಾನಕ್ಕಾಗಿ ನಟ ಪರೇಶ್ ರಾವಲ್ ತಾವು ‘ಹೇರಾ ಪೇರಿ 3’ ಸಿನಿಮಾದಿಂದ ಹೊರ ನಡೆಯುತ್ತಿರುವುದಾಗಿ ಘೋಷಣೆ ಮಾಡಿದರು.
ಈ ಬಗ್ಗೆ ಟ್ವೀಟ್ ಮಾಡಿದ ಪರೇಶ್ ರಾವಲ್, ತಾವು ‘ಹೇರಾ ಪೇರಿ 3’ ಸಿನಿಮಾದಿಂದ ಹೊರಗೆ ಹೋಗುತ್ತಿರುವುದಾಗಿ ಹೇಳಿದರು. ಆದರೆ ತಮಗೆ ನಿರ್ದೇಶಕರೊಟ್ಟಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ನಿರ್ದೇಶಕ ಪ್ರಿಯದರ್ಶನ್ ಅವರನ್ನು ಬಹುವಾಗಿ ಗೌರವಿಸುತ್ತೇನೆ ಎಂದಿದ್ದಾರೆ. ತಾವು ಆ ಪಾತ್ರದಿಂದ ರಿಟೈರ್ ಆಗುತ್ತಿರುವುದಾಗಿ ಪರೇಶ್ ರಾವಲ್ ಹೇಳಿದ್ದರು.
ಇದು ನಿರ್ಮಾಣ ಸಂಸ್ಥೆ ಕೇಪ್ ಆಫ್ ಗುಡ್ ಹೋಪ್ ಫಿಲಮ್ಸ್ಗೆ ಭಾರಿ ನಷ್ಟ ಉಂಟು ಮಾಡಿದೆ. ನಿರ್ಮಾಣ ಸಂಸ್ಥೆಯು ಈಗಾಗಲೇ ಸಿನಿಮಾಕ್ಕೆ ತಯಾರಿ ಆರಂಭಿಸಿತ್ತು. ಸಿನಿಮಾದ ಫೋಟೊಶೂಟ್ ಸಹ ಆಗಿತ್ತು. ಆದರೆ ಈಗ ಪರೇಶ್ ರಾವಲ್ ಸಿನಿಮಾದಿಂದ ಹೊರಗೆ ಹೋಗಿರುವುದು ನಿರ್ಮಾಣ ಸಂಸ್ಥೆಗೆ ಭಾರಿ ನಷ್ಟ ಉಂಟು ಮಾಡಿದೆ. ಇದೇ ಕಾರಣಕ್ಕೆ ನಿರ್ಮಾಣ ಸಂಸ್ಥೆಯು ಪರೇಶ್ ರಾವಲ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದೆ. ಬರೋಬ್ಬರಿ 25 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಡಲಾಗಿದೆ.
ಕೆಲ ವಾರಗಳ ಹಿಂದೆ ‘ಲಲ್ಲನ್ಟಾಪ್’ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದ ಪರೇಶ್ ರಾವಲ್, ‘ಹೇರಾ ಪೇರಿ’ಯ ಬಾಬು ಭಯ್ಯ ಪಾತ್ರದ ಬಗ್ಗೆ ಮಾತನಾಡುತ್ತಾ. ಆ ಪಾತ್ರ ಕೊರಳಿಗೆ ಸುತ್ತಿರುವ ನೇಣು ಹಗ್ಗದಂತೆ. ನನ್ನನ್ನು ಪದೇ ಪದೇ ಕೆಳಕ್ಕೆ ಎಳೆಯುತ್ತಲೇ ಇದೆ. ಆ ಪಾತ್ರದಿಂದ ನನಗೆ ಬಿಡುಗಡೆ ಬೇಕಾಗಿದೆ’ ಎಂದಿದ್ದರು.
