ವೈದ್ಯಕೀಯ ಸೀಟುಗಾಗಿ ನಕಲಿ ದಾಖಲೆ ಸೃಷ್ಟಿಸಿದ 21 ‘ಜಾಣ ಕಿವುಡರು’ ಲಾಕ್

ಬೆಂಗಳೂರು: ಈ ಸುದ್ದಿ ಕೊನೇವರೆಗೆ ಓದುವಷ್ಟರಲ್ಲಿ ವೈದ್ಯಕೀಯ ಸೀಟ್‌ಗಾಗಿ (Medical Seat) ಏನೇನೆಲ್ಲಾ ನಾಟಕ ಮಾಡ್ತಾರಪ್ಪಾ ಅಂತ ನೀವು ಪ್ರಶ್ನೆ ಮಾಡುತ್ತೀರಿ. ನಕಲಿ ವೈದ್ಯಕೀಯ ದಾಖಲೆ (Fake Document) ಸೃಷ್ಟಿಸಿ ಅಂಗವಿಕಲ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ 21 ಜಾಣ ಕಿವುಡರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೈದ್ಯಕೀಯ ತಪಾಸಣೆ (Medical Test) ವೇಳೆ ಸಿಕ್ಕಿಬಿದ್ದಿದ್ದಾರೆ.

ಮೆಡಿಕಲ್ ಸೀಟ್ ಪಡೆಯೋದಕ್ಕೆ ಕಳ್ಳಮಾರ್ಗ ಹಿಡಿದಿದ್ದ ಬರೋಬ್ಬರಿ 21 ಮಂದಿ ಅಭ್ಯರ್ಥಿಗಳು ಲಾಕ್ ಆಗಿದ್ದಾರೆ.
2025 ನೇ ಸಾಲಿನ ಯುಜಿಸಿಇಟಿ ಮತ್ತು ಯುಜಿ ನೀಟ್ ಸೀಟು ಕೋರಿ 21 ಅಭ್ಯರ್ಥಿಗಳು ವಿಕಲಚೇತನ ಕೋಟಾದಡಿ ಅರ್ಜಿ ಹಾಕಿದ್ದರು. ಆರಂಭದಲ್ಲಿ ಅರ್ಜಿ ಹಾಕದೆ, ಅರ್ಜಿ ತಿದ್ದುಪಡಿ ಮೂಲಕ ಪಿಹೆಚ್ ಮೀಸಲಾತಿ ಕೋರಿದ್ದಾರೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅನುಮಾನ ಬಂದಿದೆ.
ಕಿವಿ ಕೇಳಿಸಲ್ಲ ಎಂದು ಅರ್ಜಿ ಹಾಕಿದ್ದ 21 ಮಂದಿಯನ್ನ ನಿಯಮಾವಳಿಗಳ ಪ್ರಕಾರ, ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇಲ್ಲಿಂದ ಆಡಿಯೋ ಗ್ರಾಂ ಮತ್ತು ಅಂಗವಿಕಲತೆಯ ಪರೀಕ್ಷೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗಿದ್ದು, ನಕಲಿ ಅಂಗವಿಕಲ ಪ್ರಮಾಣ ಪತ್ರವನ್ನು ಸಲ್ಲಿಸಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಕೂಡಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅರ್ಜಿ ತಿದ್ದುಪಡಿ ಮಾಡಿದವರು ಲಾಕ್: ಸಿಇಟಿ ಮತ್ತು ಯುಜಿ ನೀಟ್ಗೆ ಸೀಟು ಕೋರಿ 21 ಅಭ್ಯರ್ಥಿಗಳು ಅಂಗವಿಕಲ ಕೋಟಾದಡಿ ವೈದ್ಯಕೀಯ ಸೀಟು ಹಂಚಿಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಸಲ್ಲಿಸಿದ ಮೂಲ ಅರ್ಜಿಯಲ್ಲಿ ಮೀಸಲಾತಿ ಕೋರಿರಲಿಲ್ಲ. ಆದರೆ ನಂತರ ಅರ್ಜಿ ತಿದ್ದುಪಡಿ ಮಾಡಿ ನೋಂದಣಿ ಮಾಡಿದ್ದಾರೆ. ತಮಗೆ ಶ್ರವಣದೋಷವಿದ್ದು ವೈದ್ಯಕೀಯ ಸೀಟು ಕೋರಿದ್ದಾರೆ. ಆಗಲೇ ನೋಡಿ ಅನುಮಾನ ಬಂದಿದ್ದು, ತಪಾಸಣೆ ಮಾಡಿದಾಗ ಎಲ್ಲರೂ ಸಿಕ್ಕಿಬಿದ್ದಿದ್ದಾರೆ.
ಹೆಂಗೆಲ್ಲಾ ಕಳ್ಳಾಟ ಅಡಿದ್ದರು ಗೊತ್ತಾ..?: ಅಭ್ಯರ್ಥಿಗಳು ಮೆಡಿಕಲ್ ಬೋರ್ಡ್ ಚೇರ್ಮನ್ ನಕಲಿ ಸಹಿ, ಸೀಲ್ ಬಳಸಿ ನಕಲಿ ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರವನ್ನ ಸಲ್ಲಿಸಿದ್ದರು. ಜೊತೆಗೆ UD ಐಡಿ ಕಾರ್ಡ್ನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಿಂದ ಪ್ರಮಾಣ ಪತ್ರವನ್ನ ಪಡೆದಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳನ್ನ ತಂದು ಹಾಜರುಪಡಿಸುವಂತೆ ನೋಟಿಸ್ ನೀಡಲಾಗಿತ್ತು. ಈ ವೇಳೆಯೂ ಅಕ್ರಮ ಪತ್ತೆಯಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಿಂದ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆಂದು ನೀಡಿದ ಸರ್ಟಿಫಿಕೇಟ್ ಕೂಡ ನಕಲಿ ಅನ್ನೋದು ಬೆಳಕಿಗೆ ಬಂದಿದೆ.
ಮಧ್ಯವರ್ತಿಗಳಿಂದ ಹೀಗಾಯ್ತು ಎಂದ ಪಾಲಕರು: 21 ಮಂದಿಯಲ್ಲಿ ಐವರು ಪಾಲಕರು ತಮ್ಮ ಮಕ್ಕಳ ಪರಚಾಗಿ ಲಿಖಿತ ಮಾಹಿತಿ ನೀಡಿದ್ದಾರೆ.. ಮಧ್ಯವರ್ತಿಗಳು ವೈದ್ಯಕೀಯ ಸೀಟು ಕೊಡಿಸುವುದಾಗಿ ಐಡಿಯಾ ಕೊಟ್ಟಿದ್ದರಿಂದ ಅಂಗವಿಕಲರೆಂದು ಅರ್ಜಿ ತಿದ್ದುಪಡಿ ಮಾಡಲಾಯಿತು ಎಂದು ಪಾಲಕರು ಕೆಇಎ ಮುಂದೆ ಅಲವತ್ತುಕೊಂಡಿದ್ದಾರೆ.