ಕುಮಾರಧಾರ ನದಿಗೆ ಕಸ ಹಾಕಿದ್ದಕ್ಕೆ ₹2,000 ದಂಡ: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕ್ರಮ

ಸುಬ್ರಹ್ಮಣ್ಯ : ಕುಮಾರಧಾರ ನದಿಗೆ ಕಸ ಹಾಕಿದವರಿಗೆ 2 ಸಾವಿರ ರೂಪಾಯಿ ದಂಡವನ್ನು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ವಿಧಿಸಿದೆ.ಕುಮಾರಧಾರ ಸೇತುವೆಯ ಮೇಲೆ ಕಾರ್ಕಳ ಮೂಲದ ವೇದವ್ಯಾಸ ತಂತ್ರಿ ಎಂಬವರು ವಾಹನದಿಂದ ಕಸ ಬಿಸಾಡುತ್ತಿರುವುದನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡಿದ್ದಾರೆ. ಈ ದೃಶ್ಯವನ್ನು ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಸ್ವಚ್ಛತೆ ಬಗ್ಗೆ ಈಗಾಗಲೇ ಸಮರ ಸಾರಿರುವ ಪಂಚಾಯತಿ ಅಧಿಕಾರಿಗಳು ಕಸ ಎಸೆದ ವ್ಯಕ್ತಿಯ ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ವಾಹನದ ಮಾಲೀಕರನ್ನು ಪತ್ತೆ ಮಾಡಿ ಪಂಚಾಯತಿಗೆ ಮರು ಮಾಹಿತಿ ನೀಡಿದ್ದಾರೆ. ನಂತರ ಗ್ರಾಮ ಪಂಚಾಯತಿ ನಿಯಮಾನುಸಾರ ಕ್ರಮ ಕೈಗೊಂಡು ವೇದವ್ಯಾಸ ತಂತ್ರಿ ಅವರಿಗೆ 2 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
