ಐಐಟಿ ವಿದ್ಯಾರ್ಥಿಗಳಿಂದ 20 ಚಿಪ್‌ಸೆಟ್ ವಿನ್ಯಾಸ: ಭಾರತದಲ್ಲಿ ಸೆಮಿಕಂಡಕ್ಟರ್ ಕ್ರಾಂತಿ

ನವದೆಹಲಿ:ವಿವಿಧ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇಲ್ಲಿಯವರೆಗೆ 20 ಚಿಪ್ಸೆಟ್ಗಳನ್ನು (semiconductor chip) ವಿನ್ಯಾಸಗೊಳಿಸಿದ್ದಾರೆ. ಈ ಪೈಕಿ ಎಂಟನ್ನು ಜಾಗತಿಕ ಫೌಂಡ್ರಿಗಳು (global foundries) ಮತ್ತು ಮೊಹಾಲಿಯಲ್ಲಿರುವ ಸೆಮಿಕಂಡಕ್ಟರ್ ಲ್ಯಾಬ್ಗೆ ಕಳುಹಿಸಲಾಗಿದೆ.

ಅಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಕಾರ್ಯಕ್ಕೆ ಅವುಗಳನ್ನು ಬಳಸಲಾಗುತ್ತದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಹೈದರಾಬಾದ್ ಕ್ಯಾಂಪಸ್ನ ಐಐಟಿಯಲ್ಲಿ 14ನೇ ಘಟಿಕೋತ್ಸವ ಸಮಾರಾಂಭದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವರು, ಭಾರತದ ಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ನ ವಾಣಿಜ್ಯಾತ್ಮಕ ತಯಾರಿಕೆ ಇದೇ ವರ್ಷದಲ್ಲಿ ಆರಂಭವಾಗುತ್ತದೆ ಎಂಬುದನ್ನು ಪುನರುಚ್ಚರಿಸಿದ್ದಾರೆ.
ಸರ್ಕಾರ ಕೂಡ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಎನ್ನುವ ಯೋಜನೆ ಮೂಲಕ ಈ ಉದ್ಯಮದ ಒಟ್ಟಾರೆ ಬೆಳವಣಿಗೆಗೆ ಉತ್ತೇಜಿಸುತ್ತಿದೆ. ಇದೇ ಮಿಷನ್ ಅಡಿಯಲ್ಲಿ ಚಿಪ್‌ಸೆಟ್ ಡಿಸೈನ್ಗೆ ಪರಿಕರಗಳ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ. ಐಐಟಿ ವಿದ್ಯಾರ್ಥಿಗಳು ಈ ಪರಿಕರಗಳನ್ನು ಬಳಸಿ ಚಿಪ್‌ಸೆಟ್ ಅಭಿವೃದ್ಧಪಡಿಸುತ್ತಿದ್ದಾರೆ.
ಸೆಮಿಕಂಡಕ್ಟರ್ ಉದ್ಯಮಕ್ಕೆ ಚಿಪ್‌ಸೆಟ್ ಎಷ್ಟು ಮಹತ್ವದ್ದು ಗೊತ್ತಾ?
ಚಿಪ್‌ಸೆಟ್ ಎಂಬುದು ಈಗಿನ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಿದುಳು ಎಂದು ಬಣ್ಣಿಸಬಹುದು. ಸೆಮಿಕಂಡಕ್ಟರ್ ಉದ್ಯಮದಲ್ಲಿ ಅತ್ಯಂತ ಮೌಲಯುತ ಉತ್ಪನ್ನ ಇದು.
ಒಂದು ಸೆಮಿಕಂಡಕ್ಟರ್ ಚಿಪ್ ಎಂದರೆ ಸಿಲಿಕಾನ್ ಇತ್ಯಾದಿ ಸೆಮಿಕಂಡಕ್ಟರ್ ವಸ್ತುವಿನ ಒಂದು ತುಣುಕು. ಇದರಲ್ಲಿ ಎಲೆಕ್ಟ್ರಾನಿಕ್ ಸರ್ಕ್ಯುಟ್ ನಿರ್ಮಿಸಲಾಗಿರುತ್ತದೆ. ಚಿಪ್‌ಸೆಟ್ ಎಂದರೆ ವಿವಿಧ ಚಿಪ್ಗಳನ್ನು ಒಂದಕ್ಕೊಂದು ಜೋಡಿಸಿರಲಾಗಿರುತ್ತದೆ.
ಕಂಪ್ಯೂಟಿಂಗ್ ಸಾಧನದಲ್ಲಿರುವ ಪ್ರೋಸಸರ್, ಮೆಮೊರಿ, ಸ್ಟೋರೇಜ್ ಹಾಗೂ ಇತರ ಭಾಗಗಳ ಮಧ್ಯೆ ದತ್ತಾಂಶದ ರವಾನೆಯನ್ನು ನಿಗದಿತ ಉದ್ದೇಶದ ಪ್ರಕಾರ ನಿರ್ವಹಿಸುವ ಒಂದು ವ್ಯವಸ್ಥೆಯೇ ಚಿಪ್‌ಸೆಟ್. ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ವಾಹನ ಇತ್ಯಾದಿ ಉತ್ಪನ್ನಗಳಿಗೆ ಚಿಪ್‌ಸೆಟ್ ಬೇಕೇ ಬೇಕು. ಇಲ್ಲದಿದ್ದರೆ ಈ ಉತ್ಪನ್ನಗಳಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂವಹನ ಸಾಧ್ಯವೇ ಆಗುವುದಿಲ್ಲ.
ಚಿಪ್‌ಸೆಟ್ ವಿನ್ಯಾಸ ಮಾಡುವುದು ಅಷ್ಟು ಸುಲಭವಲ್ಲ. ಚಿಪ್‌ಸೆಟ್ ಆರ್ ಅಂಡ್ ಡಿ ಕಾರ್ಯಕ್ಕೆ ಸಾವಿರಾರು ಕೋಟಿ ರೂ ಅನ್ನು ವ್ಯಯಿಸಲಾಗುತ್ತದೆ. ಹಾರ್ಡ್ವೇರ್ ಸಾಫ್ಟ್ವೇರ್ ಏಕೀಕರಣ, ವಿದ್ಯುತ್ ಬಳಕೆ ಕ್ಷಮತೆ, ಬಹಳ ಸಂಕೀರ್ಣವಾದ ತರ್ಕ ಇತ್ಯಾದಿ ಕಾರ್ಯಗಳು ಚಿಪ್‌ಸೆಟ್ ವಿನ್ಯಾಸದ ಹಿಂದೆ ಇರುತ್ತವೆ.
ಕ್ವಾಲ್ಕಾಮ್, ಇಂಟೆಲ್, ಎಎಂಡಿ, ಆಯಪಲ್, ಮೀಡಿಯಾಟೆಕ್ ಇತ್ಯಾದಿ ಹಲವು ಕಂಪನಿಗಳು ಚಿಪ್‌ಸೆಟ್ ವಿನ್ಯಾಸದಲ್ಲಿ ಪಳಗಿವೆ. ಭಾರತದಲ್ಲಿ ಹಲವು ದಶಕಗಳ ಹಿಂದೆಯೇ ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಗೆ ಪ್ರಯತ್ನವಾಗಿತ್ತಾದರೂ ಇತ್ತೀಚಿನ ಕೆಲ ವರ್ಷಗಳಿಂದ ಮಾತ್ರ ಗಂಭೀರ ಎನಿಸಬಹುದಾದ ಹೆಜ್ಜೆಗಳನ್ನು ಇಡಲಾಗಿದೆ.
ಭಾರತದಲ್ಲಿ ಸದ್ಯ ಆರು ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳಿಗೆ ಅನುಮೋದನೆ ಸಿಕ್ಕಿದೆ. ಇಲ್ಲಿ ಚಿಪ್‌ಸೆಟ್ ವಿನ್ಯಾಸದ ನೆರವಿನಿಂದ ಚಿಪ್‌ಸೆಟ್ ಅನ್ನು ತಯಾರಿಸಲಾಗುತ್ತಿದೆ. ಈ ವರ್ಷಾಂತ್ಯದೊಳಗೆ ವಾಣಿಜ್ಯಾತ್ಮಕವಾಗಿ ಚಿಪ್ಸೆಟ್ಗಳನ್ನು ಹೊರತರುವ ನಿರೀಕ್ಷೆ ಇದೆ.
