₹2 ಕೋಟಿ ಸುಲಿಗೆ ಪ್ರಕರಣ: ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೀರ್ತಿ ಪಾಟೀಲ್ ಗುಜರಾತ್‌ನಲ್ಲಿ ಬಂಧನ

ಗುಜರಾತ್: 2 ಕೋಟಿಗೂ ಅಧಿಕ ಮೊತ್ತದ ಸುಲಿಗೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೀರ್ತಿ ಪಾಟೀಲ್‌ನನ್ನು ಪೊಲೀಸರು ಕಡೆಗೂ ಬಂಧಿಸಿದ್ದಾರೆ. ಈಕೆ ಪೊಲೀಸರಿಂದ ಅರೆಸ್ಟ್ ವಾರಂಟ್ ಇದ್ದರೂ ಪೊಲೀಸರ ಕಣ್ತಪ್ಪಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಲ್ಲದೇ ವೀಡಿಯೋ ಮಾಡಿ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಆ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ಇಂತಹ ಖತರ್ನಾಕ್ ಕ್ರಿಮಿನಲ್ ಕೀರ್ತಿ ಪಾಟೀಲ್ ಅಲಿಯಾಸ್ ಕೀರ್ತಿ ಅಡಲ್ಜಾಳನ್ನು ಕಡೆಗೂ ಗುಜರಾತ್‌ನ ಸೂರತ್‌ನ ಕಪೋದ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

2024 ರ ಜೂನ್ 2ರಂದು ಈ ಕೀರ್ತಿ ಪಾಟೀಲ್ ತನ್ನ ಇತರ ಆರು ಜನರ ಜೊತೆ ಸೇರಿಕೊಂಡು ಸೂರತ್ ಮೂಲದ ಬಿಲ್ಡರ್ ಒಬ್ಬಳನ್ನು ಹನಿಟ್ರ್ಯಾಪ್ ಮಾಡಿದ್ದರು. ಈ ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್ 2 ರಂದು ಸಂತ್ರಸ್ತ ವಜು ಕತ್ತೋಡಿಯಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ವಜು ಕತ್ತೋಡಿಯಾ ನೀಡಿದ ದೂರಿನ ಆಧಾರದ ಮೇಲೆ ಕೀರ್ತಿ ಪಾಟೇಲ್, ವಿಜಯ್ ಸವಾನಿ, ಜಾಕಿರ್, ಜಾನ್ವಿ ಅಲಿಯಾಸ್ ಮನೀಷಾ ಗೋಸ್ವಾಮಿ ಮತ್ತು ಮೂವರು ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಹನಿಟ್ರ್ಯಾಪ್ ಸಂತ್ರಸ್ತ ವಜು ಕಡಿಯಾ ಈ ಹಿಂದೆ ಆಸ್ತಿ ವಿವಾದಗಳ ಕುರಿತು ಆರೋಪಿ ವಿಜಯ್ ಸವಾನಿ ವಿರುದ್ಧ ದೂರು ದಾಖಲಿಸಿದ್ದರು. ಅವರ ಈ ಪ್ರಕರಣ ವಿಚಾರಣೆಗೆ ಬರುವ ಹಂತದಲ್ಲಿದ್ದಾಗಲೇ ಆತ ಕೀರ್ತಿ ಪಾಟೇಲ್ ಸಹಾಯದಿಂದ ಸಾಮಾಜಿಕ ಜಾಲತಾಣದ ಮೂಲಕ ಉದ್ಯಮಿ ವಜು ಕತ್ತೋಡಿಯಾಗೆ ಹನಿಟ್ರ್ಯಾಪ್ ಮಾಡಲು ಹಳ್ಳ ತೋಡಿದ್ದರು. ಅದರಂತೆ ಸೋಶಿಯಲ್ ಮೀಡಿಯಾದಲ್ಲೇ ಅವರನ್ನು ಸಂಪರ್ಕಿಸಿ ಜಾನ್ವಿ ಅಲಿಯಾಸ್ ಮನೀಷಾ ಗೋಸ್ವಾಮಿ ಇದ್ದ ಫಾರ್ಮ್‌ಹೌಸ್‌ಗೆ ಉದ್ಯಮಿ ವಜು ಕತ್ತೋಡಿಯಾ ಅವರನ್ನು ಕರೆಸಿಕೊಂಡಿದ್ದರು. ಅಲ್ಲಿ ಉದ್ಯಮಿ ವಜು ಕಡಿಯಾಗೆ ಮದ್ಯ ಕುಡಿಸಿ ಜಾನ್ವಿ ಜೊತೆ ಆಕ್ಷೇಪಾರ್ಹವಾದ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.
ನಂತರ ಆ ಫೋಟೋಗಳನ್ನು ಇಟ್ಟುಕೊಂಡೆ ಅವರಿಗೆ ಬ್ಲಾಕ್ಮೇಲ್ ಮಾಡಲು ಶುರು ಮಾಡಿದ್ದು, ಸುಮಾರು 2 ಕೋಟಿಗೂ ಅಧಿಕ ಮೊತ್ತವನ್ನು ಅವರಿಂದ ವಸೂಲಿ ಮಾಡಿದ್ದಾರೆ. ಎಫ್‌ಐಆರ್ ಪ್ರಕಾರ ವಿಜಯ್ ಸವಾನಿ ಜೊತೆಗಿನ ಪ್ರಕರಣದಲ್ಲಿ ಮಧ್ಯಸ್ಥಿಕೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಆರೋಪಿ ಜಾಕಿರ್ ವಠಾಣ್, ವಜು ಕತ್ತೋಡಿಯಾಗೆ ಕರೆ ಮಾಡಿದ್ದಾರೆ. ಅದಕ್ಕೆ ಒಪ್ಪಿ ಬಂದ ಅವರನ್ನು ಜಾನ್ವಿ ಇರುವ ಫಾರ್ಮ್ ಹೌಸ್‌ಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಅವರಿಗೆ ಮದ್ಯ ಕುಡಿ ಜಾನ್ವಿಯೊಂದಿಗೆ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ನಂತರ ಅದೇ ಫೋಟೋಗಳನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೀರ್ತಿ ಪಾಟೀಲ್ ಇವರಿಗೆ ಬ್ಲಾಕ್ಮೇಲ್ ಮಾಡಲು ಶುರು ಮಾಡಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೀರ್ತೀ ಪಾಟೀಲ್ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಬ್ಲಾಕ್‌ಮೇಲ್ ಮಾಡುವುದಕ್ಕೆ ಹಾಗೂ ಬೆದರಿಸುವುದಕ್ಕೆ ಕುಖ್ಯಾತಿ ಹೊಂದಿದ್ದು, ಗುಜರಾತ್‌ನಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಆಕೆಯ ವಿರುದ್ಧ ಕನಿಷ್ಠ 10 ಎಫ್‌ಐಆರ್‌ಗಳು ದಾಖಲಾಗಿವೆ. 2020 ರಲ್ಲಿ ಪುಣೆ ಪೊಲೀಸರು ಆಕೆಯ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಅಹಮದಾಬಾದ್‌ನ ವಸ್ತಾಪುರ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಹಾಗೆಯೇ ಗಾಂಧಿನಗರ, ಪಠಾಣ್, ಜುನಾಗಡ್ ಮತ್ತು ಸೂರತ್ ಗ್ರಾಮೀಣ ಪೊಲೀಸರು ಈ ಹಿಂದೆ ಆಕೆಯ ವಿರುದ್ಧಕ್ರಿಮಿನಲ್ ಬೆದರಿಕೆ, ಹಲ್ಲೆ ಮತ್ತು ಇತರ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದರು. ಹೀಗೆ ಹಲವು ಪೊಲೀಸ್ ಠಾಣೆಗೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆಕೆಯನ್ನು ಕಡೆಗೂ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಪ್ರಮುಖ ಆರೋಪಿ ಕೀರ್ತಿ ಪಾಟೀಲ್ ಭಾರೀ ಚಾಲಾಕಿಯಾಗಿದ್ದು, ಕಳೆದೊಂದು ವರ್ಷದಿಂದ ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದಳು. ಆಕೆ ತಾನಿರುವ ಸ್ಥಳ, ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಆಗಾಗ ಬದಲಾಯಿಸುತ್ತಲೇ ಇದ್ದಳು. ನಾವು ಅವಳನ್ನು ಅಹಮದಾಬಾದ್‌ನ ಸರ್ಖೇಜ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಇರುವುದನ್ನು ಪತ್ತೆಹಚ್ಚಿ ಮನೆಯಿಂದ ಹಿಡಿದಿದ್ದೇವೆ ಎಂದು ವಲಯ-1ರ ಡಿಸಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
