15 ವರ್ಷದ ಬಾಲಕಿಯನ್ನು ಬೆದರಿಸಿ 80 ಲಕ್ಷ ರೂ. ಕಳ್ಳತನ

ಗುರುಗಾಂವ್: ತರಗತಿಯಲ್ಲಿ ಗೆಳೆಯರ ಜೊತೆ ಹರಟೆ ಹೊಡೆಯುವಾಗ 15 ವರ್ಷದ ಬಾಲಕಿ ಹೆಮ್ಮೆಯಿಂದ ತನ್ನ ಅಜ್ಜಿ ಕುರಿತು ಹೇಳಿದ್ದಾಳೆ. ಇದೇ ವೇಳೆ ಈ ವಯಸ್ಸಿಗೆ ತಾನು ಅಜ್ಜಿಯ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದಿದ್ದಾಳೆ. ಅಜ್ಜಿ ಎಂದರೆ ನನಗೆ ಇಷ್ಟ.

ಅಜ್ಜಿಗೂ ಹಾಗೇ. ಅಜ್ಜಿಯ ಬ್ಯಾಂಕ್ ಖಾತೆಯನ್ನು ತಾನು ನಿರ್ವಹಣೆ ಮಾಡುವುದಾಗಿ ಹೇಳಿದ್ದಾಳೆ. ಆದರೆ ಈ ಮಾತು ಕೊನೆಗೆ ಬಾಲಕಿಯನ್ನು ತೀವ್ರ ಪರಿತಪಿಸುವಂತೆ ಮಾಡಿದೆ. ಇಷ್ಟೇ ಅಲ್ಲ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಬ್ಲಾಕ್ಮೇಲ್, ಹೆಜ್ಜೆ ಹೆಜ್ಜೆಗೂ ಬೆದರಿಕೆ, ಮಾನಸಿಕ ತೊಳಲಾಟಗಳಿಂದ ನೊಂದು ಬರೋಬ್ಬರಿ 80 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಗುರುಗ್ರಾಂನಲ್ಲಿ ನಡೆದಿದೆ.
ಅಜ್ಜಿ ಕತೆ ತಂದ ಸಂಕಷ್ಟ
ಆಕೆ 9ನೇ ತರಗತಿ ವಿದ್ಯಾರ್ಥಿನಿ. ಓದಿನಲ್ಲೂ ಮುಂದಿದ್ದಳು. ಜೊತೆಗೆ ಕುಟುಂಬ, ಪೋಷಕರು, ಅಜ್ಜಿ ಸೇರಿದಂತೆ ಎಲ್ಲರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದ್ದಳು. ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ ಈ ಬಾಲಕಿ ತರಗತಿಯಲ್ಲಿ ಸಹಪಾಠಿಗಳ ಜೊತೆ ಹರಟೆ ವೇಳೆ ಅಜ್ಜಿಯ ಕುರಿತು ಹೇಳಿದ್ದಾಳೆ. ಅಜ್ಜಿ ಏನೇ ಬೇಕಿದ್ದರೂ ನನ್ನ ಬಳಿ ಹೇಳುತ್ತಾರೆ. ನನಗೆ ಅಜ್ಜಿಯ ಸೇವೆ ಮಾಡುವುದು ಇಷ್ಟ ಎಂದಿದ್ದಾಳೆ. ಇದೇ ವೇಳೆ ಅಜ್ಜಿಯ ಬ್ಯಾಂಕ್ ಖಾತೆಯನ್ನು ತಾನೇ ನಿರ್ವಹಿಸುವುದಾಗಿ ಹೇಳಿದ್ದಾಳೆ.
ಅಜ್ಜಿ ಕತೆ ಕೇಳಿಸಿಕೊಂಡ ಸಹಪಾಠಿ ಈ ವಿಚಾರವನ್ನು ಶಾಲೆಯ ಹೊರಗಿನ ತನ್ನ ಸಹೋದರನಿಗೆ ಹೇಳಿದ್ದಾನೆ. ಈ ಸಹೋದರ ತನ್ನ ಗ್ರೂಪ್ನಲ್ಲಿ ಚರ್ಚಿಸಿದ್ದಾನೆ. ಬಳಿಕ ಇದೇ ವಿಚಾರ ಮುಂದಿಟ್ಟು ಬಾಲಕಿಯಿಂದಲೇ ಅಜ್ಜಿ ಖಾತೆಯಿಂದ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಒಂದು ರೆಡಿ ಮಾಡಿದ್ದಾರೆ. ತಮ್ಮನ ಬಳಿಯಿಂದ ಆಕೆಯ ಫೋನ್ ನಂಬರ್ ಪಡೆದುಕೊಂಡಿದ್ದಾರೆ. ಆಕೆಯ ಸೋಶಿಯಲ್ ಮೀಡಿಯಾ ಖಾತೆಯಿಂದ ಫೋಟೋಗಳನ್ನು ತೆಗೆದಿದ್ದಾರೆ.
ಫೋಟೋ ಮಾರ್ಫ್ ಮಾಡಿ ಬೆದರಿಕೆ
ಬಾಲಕಿಯ ಫೋಟೋವನ್ನು ಮಾರ್ಫ್ ಮಾಡಿದ್ದಾರೆ. ಎಡಿಟ್ ಮಾಡಿದ ಫೋಟೋಗಳನ್ನು ಆಕೆಯ ಮೊಬೈಲ್ಗೆ ಕಳುಹಿಸಿ ಲೀಕ್ ಮಾಡುವುದಾಗಿ ಬೆದರಿಸಿದ್ದಾರೆ. ಪೊಲೀಸ್, ಕುಟುಂಬಸ್ಥರು ಪೋಷಕರಿಗೆ ಮಾಹಿತಿ ನೀಡಿದರೆ ಫೋಟೋ ಲೀಕ್ ಆಗಲಿದೆ. ಬಳಿಕ ಪ್ರಕರಣ, ಕೇಸ್ ಎನೇ ಆದರೂ ಫೋಟೋ ಡಿಲೀಟ್ ಆಗಲ್ಲ ಎಂದಿದ್ದಾರೆ. ಇದಕ್ಕೆ ಬೆದರಿದ ಬಾಲಕಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾಳೆ.
ಆನ್ಲೈನ್ ಮೂಲಕ ಹಣ ವರ್ಗಾವಣೆ
ಅಜ್ಜಿಯ ಖಾತೆ ಈಕೆ ನಿರ್ವಹಣೆ ಮಾಡುವ ಕಾರಣ ಕಿರಾತರು ಕೆಲ ಬ್ಯಾಂಕ್ ಖಾತೆ ಮಾಹಿತಿ ನೀಡಿದ್ದಾರೆ. ಈ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಬೆದರಿಕೆಗೆ ಹೆದರಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾಳೆ. ಅಜ್ಜಿಯ ನಿವೇಷನ ಮಾರಾಟ ಮಾಡಿದ 80 ಲಕ್ಷ ರೂಪಾಯಿ ಈ ಖಾತೆಯಲ್ಲಿತ್ತು. ಈ ಎಲ್ಲಾ ಹಣ ಖದೀಮರ ಖಾತೆ ಸೇರಿದೆ.
ಇದಾದ ಬಳಿಕವೂ ಇವರ ದಾಹ ಮುಗಿದಿಲ್ಲ. ಈ ಬಾಲಕಿ ಟ್ಯೂಶನ್ ಪಡೆಯುತ್ತಿದ್ದಲ್ಲಿಗೆ ತೆರಳಿ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದ ಟ್ಯೂಶನ್ ಟೀಚರ್ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿ ಮಾನಸಿಕವಾಗಿ ಏನೋ ಸಮಸ್ಯೆಯಲ್ಲಿರುವುದಾಗಿ ಸೂಚಿಸಿದ್ದಾರೆ. ಇದರಂತೆ ಪೋಷಕರು ಬಾಲಕಿ ಬಳಿ ವಿಚಾರಿಸಿದಾಗ ಘಟನೆ ಬಹಿರಂಗವಾಗಿದೆ.