ಅಪಾರ್ಟ್‌ಮೆಂಟ್ ಟೆರೇಸ್‌ನಿಂದ ಹಾರಿ 14 ವರ್ಷದ ಬಾಲಕಿ ಆತ್ಮಹತ್ಯೆ

ಮಂಗಳೂರು: 14 ವರ್ಷದ ಬಾಲಕಿಯೊಬ್ಬಳು ಅಪಾರ್ಟ್ ಮೆಂಟ್ ನ ಟೇರೆಸ್ ನಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಿನ್ನೆ ನಡೆದಿದೆ.ಮೃತ ಬಾಲಕಿಯನ್ನು ಉತ್ತರ ಪ್ರದೇಶ ಮೂಲದ ಸದ್ಯ ಬಜಿಲಕೇರಿ ನಿವಾಸಿಯಾಗಿರುವ ಖುಷಿ (14) ಎಂದು ಗುರುತಿಸಲಾಗಿದೆ. ಈಕೆ ನಗರದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 7ರಂದು ಮಧ್ಯಾಹ್ನ ದೇವಸ್ಥಾನಕ್ಕೆ ತೆರಳಿದ್ದ ಖುಷಿ ಬಳಿಕ ತನ್ನ ಸಹೋದರಿ ಮತ್ತು ಸ್ನೇಹಿತೆಯ ಜತೆಗೆ ಅಪಾರ್ಟ್ ಮೆಂಟ್‌ನ ಟೇರೆಸ್‌ಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಅವರ ಜತೆ ಮಾತನಾಡುತ್ತಲೇ ಅವರ ಕಣ್ಮುಂದೆಯೇ ಟೇರೆಸ್‌ನಿಂದ ಹಾರಿದ್ದಾಳೆ. ಗಂಭೀರ ಗಾಯಗೊಂಡ ಖುಷಿಯನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಬಂದರು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಖುಷಿ ಪ್ರತಿಭಾನ್ವಿತೆ ವಿದ್ಯಾರ್ಥಿನಿಯಾಗಿದ್ದು, ಉತ್ತಮ ಅಂಕ ಪಡೆಯುತ್ತಿದ್ದಳು. ಇತ್ತೀಚೆಗೆ ಯಾವುದೋ ಕಾರಣದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎನ್ನಲಾಗಿದೆ.