ಐರ್ಲೆಂಡ್‌ನಲ್ಲಿ ಭಾರತೀಯ ಪ್ರಜೆಯ ಮೇಲೆ ಕ್ರೂರ ಹಲ್ಲೆ, ದರೋಡೆ

ಐರ್ಲೆಂಡ್‌ನಲ್ಲಿ ಭಾರತೀಯರ ಮೇಲೆ ಹಿಂಸಾತ್ಮಕ ದಾಳಿಗಳು ಮುಂದುವರೆಯುತ್ತಿದೆ. ಕಳೆದ ವಾರವಷ್ಟೆ 6 ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಲಾಗಿದ್ದು ಇದೀಗ ಕೆಲಸಕ್ಕೆ ಹೋಗುತ್ತಿದ್ದ 51 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.

ಸಂತ್ರಸ್ತ ಲಕ್ಷ್ಮಣ್ ದಾಸ್ 22 ವರ್ಷಗಳಿಂದ ಐರ್ಲೆಂಡ್‌ನಲ್ಲಿ ವಾಸಿಸುತ್ತಿದ್ದು ಐರಿಶ್ ಪ್ರಜೆಯಾಗಿದ್ದಾರೆ. ಎರಡು ಮಕ್ಕಳ ತಂದೆಯಾದ ದಾಸ್, ಡಬ್ಲಿನ್‌ನ ಅನಂತರಾ ದಿ ಮಾರ್ಕರ್ ಹೋಟೆಲ್‌ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆಗಸ್ಟ್ 6ರ ಬೆಳಿಗ್ಗೆ ಅವರು ತಮ್ಮ ಇ-ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಮೂವರ ತಂಡ ಅವರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದೆ. ದಾಸ್ ಅವರನ್ನು ಅಡ್ಡಗಟ್ಟಿದ ಗುಂಪು ಹೊಡೆಯಲು ಪ್ರಾರಂಭಿಸಿದೆ. ಇದರಿಂದಾಗಿ ಅವರ ಹೆಲ್ಮೆಟ್ ಮುರಿಯಿತು. ಘಟನೆಯ ಸಮಯದಲ್ಲಿ ಅವರ ಫೋನ್, ಕ್ರೆಡಿಟ್ ಕಾರ್ಡ್, ನಗದು ಮತ್ತು ಎಲೆಕ್ಟ್ರಿಕ್ ಬೈಕ್ ಅನ್ನು ಸಹ ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಹಲ್ಲೆಯ ನಂತರ ಲಕ್ಷ್ಮಣ್ ದಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಕಾಲುಗಳು, ಕಣ್ಣು, ಭುಜ ಮತ್ತು ತೋಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ದಾಳಿಯಿಂದ ಚೇತರಿಸಿಕೊಳ್ಳಲು ಅವರು ಪ್ರಸ್ತುತ ರಜೆ ತೆಗೆದುಕೊಂಡಿದ್ದಾರೆ.
