ಸಂಚಾರ ನಿಯಮ ಉಲ್ಲಂಘನೆಗೆ 1,382 ಲೈಸನ್ಸ್ ಅಮಾನತು: ಮಂಗಳೂರು ಪೊಲೀಸರ ಕಠಿಣ ಕ್ರಮ

ಮಹಾನಗರ: ಭಾರತೀಯ ಮೋಟಾರು ವಾಹನ ಕಾಯಿದೆಯಡಿ ಸಂಚಾರ ನಿಯಮ ಉಲ್ಲಂಘನೆಯ ಹಲವು ಪ್ರಕರಣಗಳಲ್ಲಿ ಚಾಲಕರ ಡ್ರೈವಿಂಗ್ ಲೈಸನ್ಸ್‌ನ್ನೇ ಅಮಾನತು ಮಾಡಲು ಅವಕಾಶವಿದೆ. ಗಂಭೀರ ಪ್ರಕರಣಗಳು, ಪದೇ ಪದೇ ವಾಹನ ಸಂಚಾರ ನಿಯಮ ಉಲ್ಲಂಘನೆ ಸಂದರ್ಭದಲ್ಲಿ ಪೊಲೀಸರು ಅಮಾನತು ಅಸ್ತ್ರವನ್ನು ಪ್ರಯೋಗಿಸುತ್ತಾರೆ.
ಅತಿಯಾದ ವೇಗ, ಸಿಗ್ನಲ್ ಲೈಟ್ ಜಂಪ್, ನಿಲ್ಲಿಸುವ ಸೂಚನೆಯನ್ನು ಪಾಲಿಸದಿರುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಎಡಬದಿಯಲ್ಲಿ ಓವರ್‌ಟೇಕ್, ವಿರುದ್ಧ ದಿಕ್ಕಿನಲ್ಲಿ ಸಂಚಾರ, ಮದ್ಯ ಸೇವಿಸಿ ವಾಹನ ಚಾಲನೆ, ಅಸುರಕ್ಷಿತ ಸ್ಥಿತಿಯಲ್ಲಿರುವ ವಾಹನದ ಬಳಕೆ, ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ರೈಡಿಂಗ್, ಹೆಲ್ಮೆಟ್ ಧರಿಸದೆ ಸಂಚಾರ, ಆಯಂಬುಲೆನ್ಸ್ ಅಥವಾ ಇತರ ತುರ್ತುಸೇವಾ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುವುದು, ಸರಕು ಸಾಗಾಟ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ಮೊದಲಾದ ನಿಯಮ ಉಲ್ಲಂಘನೆಗೆ ಪರವಾನಿಗೆ ಅಮಾನತು ಮಾಡಬಹುದಾಗಿದೆ. ಪೊಲೀಸರ ವರದಿಯಾಧರಿಸಿ ಆರ್‌ಟಿಒ ಅಧಿಕಾರಿಗಳು ಅಮಾನತು ಮಾಡುತ್ತಾರೆ.
ಎಷ್ಟು ಅಮಾನತು?
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2024ರಲ್ಲಿ 1,382 ಚಾಲನಾ ಪರವಾನಿಗೆಯನ್ನು ಅಮಾನತು ಮಾಡಲಾಗಿದೆ. 2025ರ ಮಾರ್ಚ್‌ವರೆಗೆ 170 ಚಾಲನಾ ಪರವಾನಿಗೆಗಳನ್ನು ಅಮಾನತು ಮಾಡಲಾಗಿದೆ.
ಅಪಘಾತ: ಸಾವು-ನೋವು
ಕಮಿಷನರೆಟ್ ವ್ಯಾಪ್ತಿಯಲ್ಲಿ 2024ರಲ್ಲಿ 1023 ಅಪಘಾತಗಳಲ್ಲಿ 165 ಮಂದಿ ಮೃತಪಟ್ಟಿದ್ದಾರೆ. 1186 ಮಂದಿ ಗಾಯಗೊಂಡಿದ್ದಾರೆ. 2025ರ ಮಾರ್ಚ್‌ವರೆಗೆ 262 ಅಪಘಾತಗಳಲ್ಲಿ 319 ಮಂದಿ ಮೃತಪಟ್ಟಿದ್ದಾರೆ.
ವರ್ಷದಲ್ಲಿ 6.65 ಕೋಟಿ ದಂಡ
2024ರಲ್ಲಿ 1,44,859 ಪ್ರಕರಣಗಳನ್ನು ದಾಖಲಿಸಿ 6,65,76,800 ರೂ. ದಂಡ ಸಂಗ್ರಹಿಸಲಾಗಿದೆ. 2025ರ ಮಾರ್ಚ್‌ವರೆಗೆ 38,859 ಪ್ರಕರಣಗಳನ್ನು ದಾಖಲಿಸಿ 1,77,82,200 ರೂ. ದಂಡ ಸಂಗ್ರಹಿಸಲಾಗಿದೆ