ಮದುವೆ ಹೆಸರಿನಲ್ಲಿ 12 ಲಕ್ಷ ರೂ. ವಂಚನೆ: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಸಿನಿಮಾ ಸ್ಟೈಲ್‌ನ ‘ವಂಚಕಿ ಕಾಜಲ್’ ಕೊನೆಗೂ ಅರೆಸ್ಟ್

ರಾಜಸ್ಥಾನ: ಈಕೆ ಒಂದು ವರ್ಷಕ್ಕೂ ಹೆಚ್ಚು ಕಾಲ, ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ನಗರ, ಸಿಮ್ ಕಾರ್ಡ್, ಐಡೆಂಟಿಟಿಯನ್ನು ಸಿನಿಮಾ ಶೈಲಿಯಲ್ಲಿ ಬದಲಾಯಿಸಿಕೊಂಡು ಊರಿಂದ ಊರಿಗೆ ಓಡಾಡುತ್ತಿದ್ದಳು. ಮದುವೆಯ ಪವಿತ್ರ ಬಂಧನವನ್ನು ವಂಚನೆಯ ಸಾಧನವನ್ನಾಗಿ ಮಾಡಿಕೊಂಡಿದ್ದಳು. ಈಕೆಯೇ ಕಾಜಲ್. ಈಕೆ ಮೂಲತಃ ಉತ್ತರ ಪ್ರದೇಶದ ಮಥುರಾದ ಗೋವರ್ಧನ್ ಪ್ರದೇಶದವಳು. ತನ್ನ ತಂದೆ, ತಾಯಿ ಹಾಗೂ ಸೋದರಿ ಜೊತೆ ಸೇರಿ ಮದುವೆಯಾಗದ ಹುಡುಗರನ್ನು ಹಣದಾಸೆಗಾಗಿ ಮದುವೆಯಾಗಿ ವಂಚಿಸುವುದೇ ಈಕೆಯ ಕಾಯಕ.

ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಜನರಿಗೆ ಮದುವೆ ಹೆಸರಿನಲ್ಲಿ ಕಾಜಲ್ ಜನರಿಗೆ ವಂಚಿಸಿದ್ದಳು. ಸುಳ್ಳು , ನಕಲಿ ವಿವಾಹ, ಭಾವನಾತ್ಮಕವಾಗಿ ಜನರನ್ನು ಮರಳು ಮಾಡಿ, ಮೋಸಗೊಳಿಸುವ ಕಲೆ ಕರಗತವಾಗಿತ್ತು. ಮದುವೆಯಾಗದ ಹುಡುಗರನ್ನು ಹುಡುಕಿ ಅವರಿಂದ ಮದುವೆಗೆ ವಧುದಕ್ಷಿಣೆಯಾಗಿ 10 ರಿಂದ 12 ಲಕ್ಷ ರೂಪಾಯಿ ಹಣ ಪಡೆದು ಒಂದೆರೆಡು ದಿನದಲ್ಲೇ ಮದುವೆಯಾದ ಗಂಡನ ಮನೆಯಿಂದಲೇ ನಾಪತ್ತೆಯಾಗುತ್ತಿದ್ದಳು. ಈಕೆಯ ವಿರುದ್ಧ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಈ ಸುಂದರಿ ಕಾಜಲ್ ಳನ್ನು ಬಂಧಿಸುವಲ್ಲಿ ರಾಜಸ್ಥಾನ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಈಕೆಗಾಗಿ ರಾಜಸ್ಥಾನದ ಸಿಕರ್ ಜಿಲ್ಲೆಯ ಪೊಲೀಸರು ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಈಗ ಹರಿಯಾಣದ ಗುರುಗ್ರಾಮದ ಸರಸ್ವತಿ ಎನ್ ಕ್ಲೇವ್ ನಲ್ಲಿ ಕಾಜಲ್ ಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಜೀನ್ಸ್ ಪ್ಯಾಂಟ್ , ಟೀ ಶರ್ಟ್ ಧರಿಸಿಕೊಂಡು ಬಾಡಿಗೆ ಮನೆಯಲ್ಲಿ ಆರಾಮಾಗಿ ಇದ್ದ ಕಾಜಲ್ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಕಾಜಲ್ ಕೈಯಲ್ಲಿ ಇನ್ನೂ ಮದುವೆ ಹೆಣ್ಣಿನ ಮೆಹಂದಿ ಇತ್ತು. ಆದರೇ, ಪೊಲೀಸರು ಆಕೆಯ ಬಾಡಿಗೆ ರೂಮುಗೆ ಬಂದಾಗಲೂ ಶಾಂತವಾಗಿದ್ದಳು, ಮುಖದಲ್ಲಿ ನಗು ಇತ್ತು. ಯಾವುದೇ ಭಯ, ಆತಂಕ ಎಳ್ಳಷ್ಟೂ ಇರಲಿಲ್ಲ.