ಇರಾನ್ ಯುದ್ಧಪೀಡಿತ ಪ್ರದೇಶದಿಂದ 110 ಭಾರತೀಯ ವಿದ್ಯಾರ್ಥಿಗಳ ರಕ್ಷಣೆ

ಟೆಲ್ ಅವಿವ್:ಇರಾನ್‌ನ ದಾಳಿಯನ್ನು ಯಶಸ್ವಿಯಾಗಿ ಎದುರಿಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿದ್ದರೂ, ಇಸ್ರೇಲ್‌ಗೆ ರಕ್ಷಣೆ ನೀಡುತ್ತಿರುವ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯ ದಾಸ್ತಾನು ತೀವ್ರ ಕುಸಿತ ಕಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನಿಂದ ವಾಯು ದಾಳಿಗಳು ಮುಂದುವರಿದದ್ದೇ ಆದಲ್ಲಿ, ಇಂತಹ ದಾಳಿಗಳನ್ನು ಕೇವಲ 10-12 ದಿನಗಳ ಕಾಲವಷ್ಟೇ ತಡೆಯುವಷ್ಟು ಇಸ್ರೇಲ್ ಬಳಿ ಶಸ್ತ್ರಾಸ್ತ್ರ ದಾಸ್ತಾನಿದೆ ಎನ್ನಲಾಗಿದೆ. ಅಲ್ಲದೆ ಕ್ಷಿಪಣಿ ದಾಳಿಗಳಿಂದ ರಕ್ಷಿಸುತ್ತಿರುವ ಐರನ್ ಡೋಮ್ ವ್ಯವಸ್ಥೆಯ ನಿರ್ವಹಣೆ ಕೂಡ ಇಸ್ರೇಲ್‌ಗೆ ಖರ್ಚಿನ ಬಾಬತ್ತಾಗಿದೆ ಎನ್ನಲಾಗಿದೆ. ಪ್ರತೀ ಕ್ಷಿಪಣಿಗೆ 25 ಕೋಟಿ ರೂ.ಗಳಂತೆ ಒಂದು ರಾತ್ರಿಯ ದಾಳಿ ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ 2,463 ಕೋಟಿ ರೂ.ಗಳನ್ನು ಇಸ್ರೇಲ್ ವ್ಯಯಿಸಬೇಕಾಗಿದೆ ಎನ್ನಲಾಗಿದೆ.

ವಿದೇಶದಲ್ಲಿರುವ ಇಸ್ರೇಲಿಗರನ್ನು ಕರೆತರಲು 8 ವಿಮಾನಗಳು ಸಿದ್ಧ
ಟೆಲ್ ಅವೀವ್: ಸೈಪ್ರಸ್, ಬುಡಪೆಸ್ಟ್, ಅಥೆನ್ಸ್, ಮಿಲಾನ್, ರೋಮ್ ಹಾಗೂ ಲಂಡನ್‌ನಲ್ಲಿರುವ ಇಸ್ರೇಲಿ ಗರನ್ನು ದೇಶಕ್ಕೆ ಕರೆತರಲು ಇಸ್ರೇಲ್‌ನ ವಿಮಾನಯಾನ ಸಂಸ್ಥೆಯ 8 ವಿಮಾನಗಳು ಕಾರ್ಯಾಚರಣೆ ನಡೆಸಲು ಸಿದ್ಧ ವಾಗಿವೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವ ಸಂಸ್ಥೆಯು ಒಂದು ವಿಮಾನವನ್ನು ಈಗಾಗಲೇ ಸೈಪ್ರಸ್‌ನಿಂದ ಇಸ್ರೇಲ್‌ಗೆ ತಲುಪಿಸಿದೆ.

ಇರಾನ್‌ನಲ್ಲಿರುವ ಭಾರತೀಯರ ರಕ್ಷಣೆಗೆ “ಆಪರೇಷನ್ ಸಿಂಧೂ’
ಹೊಸದಿಲ್ಲಿ: ಇರಾನ್-ಇಸ್ರೇಲ್ ನಡುವೆ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರಕಾರವು “ಆಪರೇಷನ್ ಸಿಂಧೂ’ ಎಂಬ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆಯ ಭಾಗವಾಗಿ 110 ಭಾರತೀಯ ವಿದ್ಯಾರ್ಥಿಗಳನ್ನು ಇರಾನ್ ಗಡಿಯಿಂದ ಅರ್ಮೇನಿಯಾಗೆ ಜೂ.17ರಂದೇ ಕರತರಲಾಗಿದೆ. ಈ 110 ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನವು ಅರ್ಮೇನಿಯಾದಿಂದ ಭಾರತಕ್ಕೆ ಮಂಗಳವಾರ ಹೊರಟಿದೆ. ಈ ಬಗ್ಗೆ ವಿದೇಶಾಂಗ ವಕ್ತಾರ ರಣ್‌ಧೀರ್ ಜೈಸ್ವಾಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಶಾಂತಿದೂತನಾಗಲು ಪುತಿನ್ ಬಯಕೆ?
ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಶಾಂತಿದೂತನಾಗಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಬಯಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡನೀಯ ಎಂದಿರುವ ಪುತಿನ್, ಅಮೆರಿಕ ಈ ಯುದ್ಧದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದಿದ್ದಾರೆ. ಈ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳು ಪ್ರತಿಕ್ರಿಯಿಸಿದ್ದು, ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ಪುತಿನ್, ಇಲ್ಲಿ ಶಾಂತಿ ಬಯಸುತ್ತಿದ್ದಾರೆ ಎಂದು ಕುಹಕವಾಡಿವೆ. ಈವರೆಗೂ ಇರಾನ್‌ಗೆ ಪ್ರತ್ಯಕ್ಷವಾಗಿ ರಷ್ಯಾ ಯಾವುದೇ ಸಹಾಯ ಮಾಡಿಲ್ಲ.
ಟೆಹ್ರಾನ್, ಟೆಲ್ ಅವೀವ್ ನಾಶಕ್ಕೆ ಪಣ
ಇರಾನ್ ಯುದ್ಧ ತೀವ್ರತೆ ಪಡೆದುಕೊಂಡಿದ್ದು, ಉಭಯ ದೇಶಗಳು ಮತ್ತೂಂದು ದೇಶದ ರಾಜಧಾನಿಯನ್ನು ನಾಶ ಮಾಡಲು ಪಣತೊಟ್ಟಿವೆ. ಇಸ್ರೇಲ್ ನಡೆಸಿರುವ ದಾಳಿಯನ್ನು ಖಂಡಿಸಿರುವ ಇರಾನ್, ಟೆಲ್ ಅವೀವ್ ನಗರವನ್ನು ನಾಶ ಮಾಡು ವುದೇ ನಮ್ಮ ಗುರಿ ಎಂದಿದೆ. ಇರಾನ್‌ನಿಂದ ಇಸ್ರೇಲ್‌ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ ಹೀಗಾಗಿ ಟೆಹ್ರಾನ್ ನಾಶ ಮಾಡದೇ ಬಿಡುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
