ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ
ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜ, ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು (ಸೆ.21): ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜ, ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಸತ್ಯ ಹೇಳುವ ಕೆಲಸವನ್ನ ಪತ್ರಿಕೆಗಳು ಮಾಡಬೇಕು. ಆದರೆ, ಇತ್ತೀಚೆಗೆ ಸುಳ್ಳು ಸುದ್ದಿ ಸೃಷ್ಟಿಸಿ ಮತ್ತೊಬ್ಬರನ್ನು ತೇಜೋವಧೆ ಮಾಡುವ ಕೆಲಸ ಹೆಚ್ಚಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಫೇಕ್ ನ್ಯೂಸ್ ವೇಗವಾಗಿ ಬೆಳೆಯಲಿಕ್ಕೆ ಪ್ರಾರಂಭವಾಗಿದೆ. ಇದನ್ನ ತಡೆಯದೇ ಹೋದರೆ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳು ಉಳಿಯುವುದು ಕಷ್ಟವಾಗಲಿದೆ. ಕುವೆಂಪು ಅವರು ಹೇಳಿದ ಶಾಂತಿಯ ತೋಟ ಆಗೋದು ಕನಸಾಗಲಿದೆ. ಹೀಗಾಗಿ, ಸುದ್ದಿಗಳನ್ನ ಫ್ಯಾಕ್ಟ್ ಚೆಕ್ ಮಾಡಲಿಕ್ಕೆ ಸರ್ಕಾರ ಮುಂದಾಗಿದೆ. ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ತಂಡ ಸುಳ್ಳು ಸುದ್ದಿಯ ಫ್ಯಾಕ್ಟ್ ಚೆಕ್ ಮಾಡಲಿದೆ ಎಂದು ಹೇಳಿದರು. ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಿ, ಪ್ರಕಟಿಸುವುದರಿಂದ ಧಾರ್ಮಿಕ, ಸಾಮಾಜಿಕ ಘರ್ಷಣೆಗಳು ಉಂಟಾಗಿ ನಮ್ಮ ಜೊತೆಯಲ್ಲಿರುವವರಿಗೆ ತೊಂದರೆಯಾಗಲಿದೆ. ಸುಳ್ಳು ಸುದ್ದಿ ಮಾಡೋದು ಯಾರಿಗೂ ಶೋಭೆ ತರುವುದಿಲ್ಲ. ಇದನ್ನು ತಡೆಗಟ್ಟುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
