ಬೆಂಗಳೂರು: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ.


ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿವೆ. ನಿನ್ನೆ (ಜ.06) ವಿಶ್ವೇಶ್ವರಯ್ಯ ಮುಸ್ಯಿಯಂಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಇದಾದ ಬೆನ್ನಲ್ಲೇ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.ಆರೋಪಿಗಳು ಜನವರಿ 3ರಂದು ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕಚೇರಿಗೆ ಕರೆ ಮಾಡಿ, ಬೆಂಗಳೂರಿನ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾರೆ.ಕೂಡಲೇ ಮುಂಬೈನ ಎನ್ಎಸ್ಇ ಕಚೇರಿ ಅಧಿಕಾರಿಗಳು ಮಧ್ಯರಾತ್ರಿ ಒಂದು ಗಂಟೆಗೆ ಸುಮಾರಿಗೆ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಸ್ಪೋಟಕವಸ್ತು ಪತ್ತೆಯಾಗಿಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
