ಪುತ್ತೂರು ಕೊಠಡಿಯಲ್ಲಿ ಕೂಡಿ ಹಾಕಿದ್ದ ವಿವಾಹಿತ ಮಹಿಳೆಯ ರಕ್ಷಣೆ

ಅನಾರೋಗ್ಯದ ನೆಪವೊಡ್ಡಿ ಮೂರು ತಿಂಗಳಿನಿಂದ ವಿವಾಹಿತ ಮಹಿಳೆಯನ್ನು ಕನಿಷ್ಠ ಸೌಲಭ್ಯವೂ ಇಲ್ಲದ ಕೊಠಡಿಯಲ್ಲಿ ಕೂಡಿ ಹಾಕಿದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯು ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜದಲ್ಲಿ ನಡೆದಿದೆ.ಶ್ರೀಪತಿ ಹೆಬ್ಬಾರ್ ಅವರ ಪತ್ನಿ ಆಶಾಲತಾ ದಿಗ್ಬಂಧನಕ್ಕೆ ಒಳಗಾಗಿದ್ದ ಮಹಿಳೆ. ಮನೆ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿದ ಕಿಟಕಿ, ವಿದ್ಯುತ್ ಬೆಳಕು ಇಲ್ಲದ ಒಂದೇ ಬಾಗಿಲಿನ ಕೋಣೆಯಲ್ಲಿ ದಿಗ್ಬಂಧನದಲ್ಲಿರಿಸಲಾಗಿತ್ತು. ಅನಾಮಧೇಯ ಕರೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.ಆಶಾಲತಾ ಮೂಲತಃ ವಿಟ್ಲ ಸಮೀಪದವರು. ಕೆಲವು ವರ್ಷಗಳ ಹಿಂದೆ ಶ್ರೀಪತಿ ಆಕೆಯನ್ನು ಮದುವೆಯಾಗಿದ್ದರು. ಅಂತರ್ಜಾತಿ ವಿವಾಹ ಇದಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ಬಳಿಕ ಆಶಾ ಅವರ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕಾಗಿ ಮನೆ ಸಮೀಪದ ಕೊಠಡಿಯೊಳಗೆ ಕೂಡಿ ಹಾಕಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ.ಗೋದಾಮು ಮಾದರಿಯ ಕೊಠಡಿಯೊಳಗೆ ದಿನ ಕಳೆಯುತ್ತಿದ್ದ ಆಶಾಲತಾಗೆ ಹೊರ ಜಗತ್ತಿನ ಸಂಪರ್ಕವೇ ಇರಲಿಲ್ಲ. ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಮಲ-ಮೂತ್ರವೆಲ್ಲ ಕೊಠಡಿಯೊಳಗೇ ಆಗುತ್ತಿತ್ತು. ಚಾಪೆ ಕೂಡ ಇಲ್ಲದ ಕಾರಣ ನೆಲದಲ್ಲೇ ಮಲಗಬೇಕಿತ್ತು. ಕೊಠಡಿ ದುರ್ವಾಸನೆಯಿಂದ ಕೂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯವರು ದಿನಕ್ಕೆ ಒಂದು ಬಾರಿ ಬಿಸ್ಕೆಟ್, ಚಹಾ ಬಿಟ್ಟರೆ ಬೇರೇನೂ ಕೊಡುತ್ತಿರಲಿಲ್ಲ ಎನ್ನಲಾಗಿದೆ. ದೇಹ ಕ್ಷೀಣಿಸಿದ ಪರಿಣಾಮ ಬಿದ್ದುಕೊಂಡ ಸ್ಥಿತಿಯಲ್ಲಿದ್ದ ಆಶಾ ಅವರನ್ನು ಅಧಿಕಾರಿಗಳು ಕೊಠಡಿಯಿಂದ ಹೊರತಂದು ಸ್ನಾನ ಮಾಡಿಸಿ ಆಸ್ಪತ್ರೆಗೆ ದಾಖಲಿಸಿದರು.
