ಚುನಾವಣೆ ನಂತರ ರಾಹುಲ್ ಗಾಂಧಿಯವರನ್ನು ಬಂಧಿಸಲಾಗುವುದು: ಅಸ್ಸಾಂ ಸಿಎಂ

ಸಿಬ್ಸಾಗರ್: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿರುವ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಚುನಾವಣೆ ನಂತರ ಬಂಧಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಬುಧವಾರ ಹೇಳಿದ್ದಾರೆ.
ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ಅಸ್ಸಾಂ ಪೊಲೀಸರು ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಹಲವು ನಾಯಕರ ವಿರುದ್ಧ “ಉದ್ದೇಶಪೂರ್ವಕ ಹಿಂಸಾಚಾರದ ಕೃತ್ಯಗಳ” ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
“ನಾವು ಎಫ್‌ಐಆರ್ ದಾಖಲಿಸಿದ್ದೇವೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿದೆ ಮತ್ತು ಲೋಕಸಭೆ ಚುನಾವಣೆಯ ನಂತರ ರಾಹುಲ್ ಗಾಂಧಿಯವರನ್ನು ಬಂಧಿಸಲಾಗುವುದು ”ಎಂದು ಸಿಬ್ಸಾಗರ್ ಜಿಲ್ಲೆಯ ನಜೀರಾದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಶರ್ಮಾ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.
”ಎಸ್‌ಐಟಿ ಮೂಲಕ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಅಸ್ಸಾಂ ಸಿಐಡಿಗೆ ವರ್ಗಾಯಿಸಲಾಗಿದೆ” ಎಂದು ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಹೇಳಿದ್ದಾರೆ.
ಅಸ್ಸಾಂ ನಲ್ಲಿ ನಡೆಯುತ್ತಿರುವ ಯಾತ್ರೆ ವೇಳೆ ಆಕ್ರೋಶ ಹೊರ ಹಾಕಿರುವ ರಾಹುಲ್ ಗಾಂಧಿ, ”ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದು, ಅವರ ನಿಯಂತ್ರಕ ದೆಹಲಿಯಲ್ಲಿ ಕುಳಿತಿದ್ದಾರೆ. ಶರ್ಮಾ ಅವರಿಗೆ ರಾಹುಲ್ ಗಾಂಧಿಯನ್ನು ಹೆದರಿಸಬಹುದು ಎಂಬ ಕಲ್ಪನೆ ಎಲ್ಲಿಂದ ಬಂತು ಎಂದು ತಿಳಿದಿಲ್ಲ.ನನ್ನ ಮೇಲೆ ಎಷ್ಟು ಬೇಕೋ ಅಷ್ಟು ಕೇಸ್ ಹಾಕಲಿ ನನಗೆ ಭಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ
