ಗೋಕರ್ಣದಲ್ಲಿ ಪ್ರಭು ಶ್ರೀ ರಾಮ ತಪಸ್ಸು: ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ರಾಮತೀರ್ಥ ದೇವಸ್ಥಾನ ಸ್ಥಾಪನೆ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇತ್ತ ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಶ್ರೀ ರಾಮ ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ತಪಸ್ಸು ನಡೆಸಿದ ರಾಮ ತೀರ್ಥದಲ್ಲಿ ದೇವಸ್ಥಾನ ಜೀರ್ಣೋದ್ಧಾರದ ಜೊತೆ ಜೊತೆಗೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಸುಂದರ ಶಾಂತತೆಯ ಪರಿಸರ ಹೊಂದಿರುವ ಈ ರಾಮತೀರ್ಥ ಕ್ಷೇತ್ರ ಹೆಚ್ಚು ಪ್ರಚಲಿತವಿಲ್ಲ.
ಇನ್ನು ಬ್ರಾಹ್ಮಣನಾದ ರಾವಣನನ್ನು ರಾಮ ವಧಿಸಿದ ನಂತರ ಬ್ರಹ್ಮ ಹತ್ಯೆ ದೋಷ ನಿವಾರಣೆಗಾಗಿ ಇಲ್ಲಿಗೆ ಬಂದು ತಪಸ್ಸು ಆಚರಿಸಿದ ಎಂಬ ಪ್ರತೀತಿ ಇದೆ. ಈ ಪುಷ್ಕರಣಿಯನ್ನು ರಾಮ ತನ್ನ ಬಾಣದಿಂದ ಸೃಷ್ಟಿಸಿದ ಎಂಬ ಪುರಾಣ ಕಥೆ ಇದ್ದು ಸರ್ವ ಋತುವಿನಲ್ಲೂ ಸ್ಫಟಿಕದಂತೆ ಶುದ್ಧವಾಗಿ ಹರಿಯುತ್ತದೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದ್ದು ಈ ವೇಳೆ ಈ ಪುರಾತನ ರಾಮಮಂದಿರದಲ್ಲಿ ವಿಶೇಷ ಪೂಜೆ ರಾಮ ಮೂರ್ತಿಯ ಪಲ್ಲಕ್ಕಿ ಉತ್ಸವ, ದೀಪೋತ್ಸವ ಸೇರಿದಂತೆ ಅನೇಕ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
