ಕೋಲ್ಕತ್ತ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಹೊಸದಿಲ್ಲಿ: ಕೋಲ್ಕತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

“ಈ ಘಟನೆಯಿಂದ ನಾನು ಭೀತಳಾಗಿದ್ದೇನೆ. ಸಮಾಜದ ಸಾಮೂಹಿಕ ಮರೆವಿನ ಪರಿಣಾಮದಿಂದ ಈ ಅಸಹ್ಯದ ಕೃತ್ಯ ನಡೆದಿದೆ’ ಎಂದು ಹೇಳಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುರ್ಮು, “ಹೆಣ್ಣನ್ನು ಗಂಡಿನಂತೆಯೇ ಪೂರ್ಣ ರೀತಿಯಲ್ಲಿ ಮನುಷ್ಯರಂತೆ ಕಾಣದಿರುವುದು, ಕಡಿಮೆ ಶಕ್ತಿಶಾಲಿ, ಕಡಿಮೆ ಸಮರ್ಥಳು, ಕಡಿಮೆ ಬುದ್ಧಿವಂತಳು ಎಂದು ನೋಡುವ ಹೀನಾಯ ಮನಃಸ್ಥಿತಿಯಿಂದ ಕ್ರೂರ ಅತ್ಯಾಚಾರಗಳು ಸಂಭವಿಸುತ್ತಿವೆ. ಯಾವ ನಾಗರಿಕ ಸಮಾಜವೂ ತನ್ನ ಮಗಳು, ಸಹೋದರಿಯರನ್ನು ಇಂತಹ ದೌರ್ಜನ್ಯಕ್ಕೆ ಒಳಪಡಿಸುವುದಿಲ್ಲ. ಇದು ಅತಿಯಾಯಿತು. 2012ರಲ್ಲಿ ದಿಲ್ಲಿಯಲ್ಲಿ “ನಿರ್ಭಯಾ’ ಪ್ರಕರಣ ನಡೆದು 12 ವರ್ಷಗಳಾಗಿವೆ. ತದನಂತರವೂ ಅಸಂಖ್ಯಾಕ ಅತ್ಯಾಚಾರಗಳು ನಡೆದಿವೆ. ಈ ಸಾಮೂಹಿಕ ಮರೆವು ಅಸಹ್ಯಕರ’ ಎಂದು ಮುರ್ಮು ಹೇಳಿದ್ದಾರೆ.
“ಇತಿಹಾಸವನ್ನು ಎದುರಿಸಲು ಹೆದರುವ ಸಮಾಜಗಳು ಮಾತ್ರ ಸಾಮೂಹಿಕ ಮರೆವಿಗೆ ಶರಣಾಗುತ್ತವೆ. ಭಾರತ ಇತಿಹಾಸವನ್ನು ಎಲ್ಲ ರೀತಿಯಿಂದ ಎದುರಿಸಲೇಬೇಕು. ಇಂತಹ ವಿಕೃತಿಗಳ ವಿರುದ್ಧ ಸಮಗ್ರವಾದ ಕ್ರಮ ತೆಗೆದುಕೊಂಡು, ಈಗಲೇ ಅದನ್ನು ಹೊಸಕಿ ಹಾಕೋಣ’ ಎಂದು ರಾಷ್ಟ್ರಪತಿ ಮುರ್ಮು ಖಾರವಾದ ಶಬ್ದಗಳಲ್ಲಿ ಹೇಳಿದ್ದಾರೆ.
